ಚಿತ್ರದುರ್ಗ : ಇರುವ ಪರಿಸರ ಕಳೆದುಕೊಳ್ಳಬಾರದು. ಪರಿಸರ ನಿರ್ಮಾಣಮಾಡುವುದಕ್ಕಿಂತ ಮುಖ್ಯವಾಗಿ ಇರುವುದನ್ನು ಜೋಪಾನವಾಗಿ ಕಾಪಾಡಬೇಕು ಎಂದು ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ತಿಳಿಸಿದರು.
ಎಸ್.ಜೆ.ಎಸ್. ಸಮೂಹ ಶಾಲೆಗಳಿಂದ ಭೋವಿ ಗುರುಪೀಠದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯನ್ನು ಸಸಿಗೆ ನೀರು ಹಾಯಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ನಿಸರ್ಗದ ಪ್ರೀತಿ ಬೆಳೆಯಬೇಕು. ಮನುಷ್ಯ ನಿಸರ್ಗದ ಕೂಸು ಎಂದು ಹೇಳಿದರು.
ಪ್ರಕೃತಿ ತಾಯಿ ಇದ್ದಂತೆ, ತಾಯಿ ಮಮತೆಯಂತೆ ಇಡೀ ನಿಸರ್ಗವನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಿಸರ್ಗವನ್ನು ಹಾಳು ಮಾಡುವುದನ್ನು ಕಾಣುತ್ತೇವೆ. ಆದರೆ, ಹಾಳುಮಾಡಿದ ಪರಿಸರಕ್ಕೆ ಪ್ರತ್ಯೇಕವಾಗಿ ಅಷ್ಟೇ ಸರಿಸಮಾನ ಪರಿಸರವನ್ನು ನಿರ್ಮಾಣಮಾಡಬೇಕು. ಪ್ರಕೃತಿ ಬೆಳೆಸುವ ಯೋಚನೆ ನಾಗರಿಕ ಸಮಾಜಕ್ಕೆ ಬರಬೇಕು ಎಂದು ತಿಳಿಸಿದರು.
ಮನುಷ್ಯನ ಆರೋಗ್ಯ ಕ್ಷಿಣಿಸುತ್ತಿದೆ. ಮನುಷ್ಯನಿಗೆ ಆಹಾರಕ್ಕಿಂತ ಗಾಳಿ, ನೀರು, ಬೆಳಕು ಮುಖ್ಯ. ಗಾಳಿ ಮತ್ತು ನೀರಿಗೆ ಅಹಾಕಾರ ಎದಿದೆ. ಪ್ರಕೃತಿಯ ಮುನಿಸಿನ ಕಾರಣಕ್ಕೆ ಕರೋನದಂತಹ ಬಿಕ್ಕಟ್ಟುಗಳನ್ನು ನಾವು ಈ ಸಂದರ್ಭದಲ್ಲಿ ನೋಡುತ್ತಿದ್ದೇವೆ. ನಿಸರ್ಗದ ಮೌಲ್ಯವನ್ನು ಪ್ರತಿಯೊಬ್ಬರು ಅರಿಯಬೇಕು. ಹಣ ನೀಡಿದರೆ ಉತ್ತಮ ನಿಸರ್ಗ ಸಿಗದು, ಉತ್ತಮ ನಿಸರ್ಗವನ್ನು ಸೃಷ್ಠಿಸುವಲ್ಲಿ ಮಾನವ ಹೆಚ್ಚು ಶ್ರಮಿಸಬೇಕು ಎಂದು ಹೇಳಿದರು.
ಯೋಜನೆಗಳಿಗೆ ಬಲಿಯಾಗುವ ಸಸ್ಯಸಂಪತ್ತನ್ನು ಪರ್ಯಾಯವಾಗಿ ಬೆಳಸಬೇಕು. ಯೋಜನೆಗಳ ಹೆಸರಲ್ಲಿ ದಿನಗಳನ್ನು ಕಳೆದರೆ ಪರಿಸರದಲ್ಲಿ ವ್ಯತಿರೀಕ್ತ ಪರಿಣಾಮಗಳು ಉಂಟಾಗುತ್ತವೆ. ಆದ್ದರಿಂದ ಭವಿಷ್ಯದಲ್ಲಿ ಪ್ರಕೃತಿಯ ಸಂಪತ್ತು ಹೆಚ್ಚಿಸುವ ಚಿಂತನೆಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಮುಖ್ಯೋಪಾಧ್ಯಾಯರಾದ ಶಿವಕುಮಾರ್, ಶ್ರೀಧರ್ ಉಪಸ್ಥಿತರಿದ್ದರು. ಎಸ್.ಜೆ.ಎಸ್.ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಬೋಧಕ, ಬೋಧಕೇತರ ವರ್ಗ ಉಪಸ್ಥಿತರಿದ್ದರು.