ಬೆಂಗಳೂರು: ರಾಜಕಾರಣದಲ್ಲಿ ಯಾರು ಯಾವತ್ತು ಶತ್ರುಗಳಲ್ಲ. ಮಾತಲ್ಲಿ ಹೊಡೆದಾಡಿಕೊಂಡವರು, ದ್ವೇಷ ಕಾರಿದವರು ಸಭೆ ಸಮಾರಂಭಗಳಲ್ಲಿ ಸಿಕ್ಕಾಗ ಆತ್ಮೀಯವಾಗಿಯೇ ಮಾತಾಡುತ್ತಾರೆ. ಅಲ್ಲಿ ಯಾವ ರಾಜಕೀಯವೂ ಬರಲ್ಲ.. ಯಾವ ದ್ವೇಷವೂ ಬರಲ್ಲ. ಇದಕ್ಕೆಲ್ಲಾ ಉದಾಹರಣೆಯೆಂಬಂತೆ ಇಂದು ಬಿಜೆಪಿ ಶಾಸಕನ ಮಗಳ ಜೊತೆಗೆ ಸಚಿವರ ಮಗನ ನಿಶ್ಚಿತಾರ್ಥ ನಡೆದಿದೆ. ಕಾಂಗ್ರೆಸ್ ನ ಭೈರತಿ ಸುರೇಶ್ ಹಾಗೂ ಬಿಜೆಪಿಯ ಎಸ್.ಆರ್. ವಿಶ್ವನಾಥ ್ ಅಧಿಕೃತವಾಗಿ ಬೀಗರಾಗಿದ್ದಾರೆ.
ನಗರದ ತಾಜ್ ವೆಸ್ಟೆಂಡ್ ಹೊಟೇಲ್ ನಲ್ಲಿ ಸಚಿವರ ಮಗನ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದೆ. ಈ ನಿಶ್ಚಿತಾರ್ಥಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿ ನವ ವಧು-ವರರಿಗೆ ಶುಭ ಹಾರೈಸಿದ್ದಾರೆ. ಜೊತೆಗೆಸಚಿವ ರಾಮಲಿಂಗಾ ರೆಡ್ಡಿ, ಮಧು ಬಂಗಾರಪ್ಲ, ಎಂ.ಸಿ ಸುಧಾಕರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಗೋವಿಂದ ರಾಜು ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.
ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಮಗಳ ನಿಶ್ಚಿತಾರ್ಥವನ್ನು ಸಚಿವ ಭೈರತಿ ಸುರೇಶ್ ಮಗನ ಜೊತೆಗೆ ನೆರವೇರಿಸಿದ್ದಾರೆ. ಖಾಸಗಿ ಹೊಟೇಲ್ ನಲ್ಲಿ ನಡೆದ ಈ ನಿಶ್ಚಿತಾರ್ಥ ಕುಟುಂಬಸ್ಥರು, ಆಪ್ತರು, ರಾಜಕೀಯ ಗಣ್ಯರ ಸಮ್ಮುಖದಲ್ಲಿ ನೆರವೇರಿದೆ. ನಿಶ್ಚಿತಾರ್ಥಕ್ಕೆ ಬಂದ ಅತಿಥಿಗಳು ಕೂಡ ಗಂಡು-ಹೆಣ್ಣಿಗೆ ಹಾರೈಸಿದರು. ಮದುವೆ ದಿನಾಂಕವನ್ನು ಇನ್ನು ನಿಗಧಿ ಮಾಡಿಲ್ಲ. ಅತಿ ಶೀಘ್ರದಲ್ಲಿಯೇ ಅದ್ದೂರಿ ಮದುವೆಗೂ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಸಾಕ್ಷಿಯಾಗಬಹುದು.
ರಾಜಕೀಯ ದ್ವೇಷ, ಕಿತ್ತಾಟ, ಅಪವಾದಗಳೆಲ್ಲ ಚುನಾವಣೆಗಷ್ಟೇ ಸೀಮಿತ ಎನ್ನುವುದನ್ನು ಈ ಇಬ್ಬರು ನಾಯಕರು ಬೀಗರಾಗುವ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ರಾಜಕೀಯದಲ್ಲಿ ದ್ವೇಷ ಮೀರಿ ಸಂಬಂಧಿಗಳಾಗಬಹುದು ಎಂಬುದನ್ನು ನಿರೂಪಿಸಿದ್ದಾರೆ.