ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ನ.22): ಸದಸ್ಯರು ಹಾಗೂ ಆಡಳಿತ ಮಂಡಳಿಯ ಸಹಕಾರದೊಂದಿಗೆ ಸೊಸೈಟಿಯನ್ನು ಮಾದರಿಯನ್ನಾಗಿ ಮಾಡುವ ಆಸೆಯಿದೆ ಎಂದು ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ, ಅಧ್ಯಕ್ಷ ಮಹಮದ್ ನಿಜಾಮುದ್ದಿನ್ ಭವರಸೆ ನೀಡಿದರು.
ಅಗಸನಕಲ್ಲಿನಲ್ಲಿನ ಟಿ.ಎಂ.ಕೆ.ಕಾಂಪೌಂಡ್‍ನಲ್ಲಿರುವ ಎಸ್.ಅಹಮದ್ ಪ್ಯಾಲೇಸ್‍ನಲ್ಲಿ ಸೋಮವಾರ ನಡೆದ ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2020-21 ನೇ ಸಾಲಿನ ಸರ್ವ ಸದಸ್ಯರ 57 ನೇ ಸಾಮಾನ್ಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಸೊಸೈಟಿಯಿಂದ ಸಾಲ ಪಡೆದವರು ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಪ್ರಾಮಾಣಿಕವಾಗಿ ಮರು ಪಾವತಿ ಮಾಡಿದ್ದರಿಂದ ಈ ವರ್ಷ 27.50 ಲಕ್ಷ ರೂ.ಲಾಭದಲ್ಲಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ. ಸದಸ್ಯರುಗಳ ಸಹಕಾರವೇ ಲಾಭಕ್ಕೆ ಕಾರಣ. 1350 ಸದಸ್ಯರುಗಳಿದ್ದು, 13.50 ಲಕ್ಷ ರೂ.ಸದಸ್ಯರುಗಳ ಹಣವಿದೆ. ಐದುವರೆ ಕೋಟಿ ರೂ.ದುಡಿಯುವ ಬಂಡವಾಳವಿದ್ದು, ಹದಿನಾಲ್ಕು ಕೋಟಿ ರೂ.ವಹಿವಾಟಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮೆದೇಹಳ್ಳಿ ರಸ್ತೆಯಲ್ಲಿ ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿದ್ದು, ರಸ್ತೆ ಅಗಲೀಕರಣವಾದರೆ ಅಲ್ಲಿ ಕಾರ್ಯನಿರ್ವಹಿಸುವುದು ಕಷ್ಟವಾಗಬಹುದು ಎನ್ನುವುದನ್ನು ಮನಗಂಡು 53 ಲಕ್ಷ 20 ಸಾವಿರ ರೂ.ಬೆಲೆ ಬಾಳುವ ನಿವೇಶನವನ್ನು ಕೊತ್ವಾಲ್ ನಗರದಲ್ಲಿ ಖರೀಧಿಸಿದ್ದು, ಭವ್ಯವಾದ ಕಟ್ಟಡ ನಿರ್ಮಿಸುವ ಆಸೆಯಿದೆ. ಕಟ್ಟಡ ನಿರ್ಮಾಣಕ್ಕೆ ಹಣದ ಕೊರತೆಯಾದರೆ ಕೈಯಿಂದ ಸ್ವಂತ ಹಣವಾದರೂ ಖರ್ಚು ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಸದಸ್ಯರುಗಳಲ್ಲಿ ವಿನಂತಿಸಿದರು.
ಶೇ.90 ರಷ್ಟು ಸಾಲ ವಸೂಲಾಗಿದೆ. 25 ಸಾವಿರ ರೂ.ಗಳ ಸಾಲ ಪಡೆದ ಸದಸ್ಯರುಗಳು ಪ್ರಾಮಾಣಿಕವಾಗಿ ಹಿಂದಿರುಗಿಸಿದರೆ ಐವತ್ತು ಸಾವಿರ ರೂ.ಗಳ ಸಾಲ ನೀಡಲಾಗುವುದು. ಐವತ್ತು ಸಾವಿರ ರೂ.ಗಳ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿಸಿದವರಿಗೆ ಅರವತ್ತು ಸಾವಿರ ರೂ.ಗಳ ಸಾಲ ನೀಡಲಾಗುವುದು. ಸೊಸೈಟಿಯ ಸದಸ್ಯರುಗಳಿಗೆ ಇನ್ಸುರೆನ್ಸ್ ಮಾಡಿಸುವ ಕುರಿತು ಸದಸ್ಯರೊಬ್ಬರು ಮಹಾಸಭೆ ಗಮನಕ್ಕೆ ತಂದಾಗ ಸದಸ್ಯರುಗಳಿಗೆ ಅನಕೂಲವಾಗುವುದಾದರೆ ಮಾಡಿಸೋಣ.
ಈ ಸಂಬಂಧ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾಗುವುದು. ಸಿ.ಎನ್.ಜಿ.ಹೊಸ ಆಟೋ ಖರೀಧಿಸುವಲ್ಲಿ ಆಸಕ್ತಿಯುಳ್ಳವರಿಗೆ ಕಡಿಮೆ ಬಡ್ಡಿ ದರದಲ್ಲಿ ಸೊಸೈಟಿಯಿಂದ ಸಾಲ ನೀಡಲಾಗುವುದು. ಇದಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಬೇಕಲ್ಲದೆ ಪಡೆದ ಸಾಲವನ್ನು ಪ್ರಾಮಾಣಿವಾಗಿ ಹಿಂದಿರುಗಿಸಬೇಕು. ಕೊರೋನಾ ಸಂಪೂರ್ಣವಾಗಿ ನಿರ್ಮೂಲನೆಯಾದರೆ ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಗುವುದು ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಅಧ್ಯಕ್ಷ ಮಹಮದ್ ನಿಜಾಮುದ್ದಿನ್ ಕೋರಿದರು.
ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಮಹಮದ್ ಶಫಿ, ಗೌರವ ಕಾರ್ಯದರ್ಶಿ ಸೈಯದ್ ದಾದಾಪೀರ್, ನಿರ್ದೇಶಕರುಗಳಾದ ಮಹಮದ್ ಹಫೀಜ್, ನಯಾಜ್ ಅಹಮದ್, ಸಾಧಿಕ್‍ಭಾಷ, ಮಹಮದ್ ಶಫೀವುಲ್ಲಾ, ಅಫ್ತಾಬ್‍ಪಾಷ, ಜಮೀಲ್ ಅಹಮದ್, ಶ್ರೀಮತಿ ಅಪ್ಸರಭಾನು, ಶ್ರೀಮತಿ ರಫಿಕಾಭಾನುಶ್ರಿ, ಅಬ್ದುಲ್‍ರೌಫ್ ಎಂ. ಇವರುಗಳು ವೇದಿಕೆಯಲ್ಲಿದ್ದರು.
ಸೊಸೈಟಿಯ ಹಿರಿಯ ಸದಸ್ಯರುಗಳು ಸಾಮಾನ್ಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.