ಬೆಂಗಳೂರು: ಗೆರಹ ಸಚಿವ ಜಿ ಪರಮೇಶ್ವರ್ ಮನೆಯಲ್ಲಿ ಇತ್ತಿಚೆಗೆ ಔತಣಕೂಟ ಏರ್ಪಡಿಸಲಾಗಿತ್ತು. ಈ ಔತಣಕೂಟ ಆದ ಮೇಲೆ ಸಾಕಷ್ಟು ಚರ್ಚೆಗಳು ನಡೆದವು. ಹುದ್ದೆಯ ಬಗ್ಗೆಯೇ ಚರ್ಚೆಗಳಾಗಿದೆ ಎಂದು ಸುದ್ದಿ ಹಬ್ಬಿದ್ದವು. ಈ ಸಂಬಂಧ ಇದೀಗ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಗೃಹ ಸಚಿವ ಜಿ ಪರಮೇಶ್ವರ್ ಮನೆಯಲ್ಲಿ ನಡೆದದ್ದು ಹುದ್ದೆ ಬಗ್ಗೆ ಚರ್ಚೆ ಅಲ್ಲ, ಅಲ್ಲಿನ ಮುದ್ದೆ ಬಗ್ಗೆ. ನಮ್ಮ ನಾಯಕರನ್ನು ಪರಮೇಶ್ವರ್ ಅವರು ಊಟಕ್ಕೆ ಕರೆದಿದ್ದರು. ಆದ್ರೆ ಊಟದ ನಂತರ ಏನೇನೋ ವ್ಯಾಖ್ಯಾನಗಳು ಆಗುತ್ತಿವೆ. ಔತಣಕೂಟಕ್ಕೆ ಕರೆದ ವಿಚಾರದ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.
ಔತಣಕೂಟದ ಬಳಿಕ ಬರುತ್ತಿರುವ ವ್ಯಾಖ್ಯಾನಗಳನ್ನು ಪರಮೇಶ್ವರ್ ಆಗಲಿ, ಸಿಎಂ ಆಗಲಿ ಅಥವಾ ಸತೀಶ್ ಜಾರಕಿಹೊಳಿ ಅವರಾಗಲಿ ನೀಡಿಲ್ಲ. ಇನ್ನೊಂದು ದಿನ ಡಿಕೆ ಶಿವಕುಮಾರ್ ಅವರು ಊಟಕ್ಕೆ ಕರೆಯುತ್ತಾರೆ. ಆಗ ಡಿಸಿಎಂ ಬಂದಿಲ್ಲ ಅಂತ ಇನ್ನೊಂದು ಅರ್ಥ ಕಲ್ಪಿಸಬಾರದು ಎಂದು ಹೇಳಿದ್ದಾರೆ. ಇದೆ ವೇಳೆ ದಲಿತ ಸಿಎಂ ವಿಚಾರಕ್ಕೆ ಮಾತನಾಡಿ, ಈಗ ಆ ಪ್ರಶ್ನೆಯೇ ಬರುವುದಿಲ್ಲ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರ್ಯಾರಿಗೆ ಯಾವ ಹುದ್ದೆ ನೀಡಿದ್ದಾರೋ, ಆ ಹುದ್ದೆಗಳನ್ನು ಎಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಇದ್ದಾರೆ. ಮುಂದಿನ ತೀರ್ಮಾನ ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ. ಉನ್ನತ ಸ್ಥಾನ, ಹಣ, ಆಮಿಷ ಇಟ್ಟು ಸೆಳೆಯುವುದೇ ಬಿಜೆಪಿಯ ತಂತ್ರವಾಗಿದೆ ಎಂದು ಆಪರೇಷನ್ ಕಮಲದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.