ಬೆಂಗಳೂರು: ಹಣ್ಣು ತಿಂದವರು ಬಚಾವಾದ್ರೆ ಸಿಪ್ಪೆ ತಿಂದವರು ಸಿಕ್ಕಿ ಬೀಳುತ್ತಾರೆ ಎಂಬ ಗಾದೆ ಮಾತಿದೆ. ಆ ಮಾತಿನಂತೆ ಆಗಿದೆ ಸಂಸದ ತೇಜಸ್ವಿ ಸೂರ್ಯ ಅವರಿಗೆ ಮಸಾಲೆ ದೋಸೆ ತಂದುಕೊಟ್ಟವನ ಪಾಡು. ದೋಸೆ ಡೆಲಿವರಿ ಮಾಡಿದ್ದಕ್ಕೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಮಳೆ ಕಾರಣದಿಂದ ಬೆಂಗಳೂರಿನ ಸ್ಥಿತಿ ಕೆಲವೊಂದು ಏರಿಯಾಗಳು ಜಲಾವೃತವಾಗಿದ್ದವು. ಇಂಥ ಸಮಯದಲ್ಲಿ ತೇಜಸ್ವಿ ಸೂರ್ಯ ಮಸಾಲೆ ದೋಸೆ ತಿಂದು ಆ ವಿಡಿಯೋ ಮೂಲಕ ಪ್ರಮೋಷನ್ ಮಾಡಿದ್ದರು. ಈ ವಿಡಿಯೋ ವೇಯರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಸಂಸದರನ್ನು ಟೀಕೆ ಮಾಡಿ, ದೋಸೆ ಪಾರ್ಸಲ್ ಕಳುಹಿಸಿದ್ದರು. ಆದ್ರೆ ಆ ದೋಸೆ ತೇಜಸ್ವಿ ಸೂರ್ಯ ಅವರನ್ನು ತಲುಪಿರಲಿಲ್ಲ.
ಆ ಬಗ್ಗೆ ಇಂದು ಟ್ವೀಟ್ ಮೂಲಕ ಹರಿಹಾಯ್ದಿದ್ದರು. ಕಾಂಗ್ರೆಸ್ ನವರ ಮಸಾಲೆ ದೋಸೆ ಇನ್ನು ತಲುಪಲೇ ಇಲ್ಲ. ಇದೆಲ್ಲೂ ಸುಳ್ಳು ಹೇಳುತ್ತಾರೆ. ದೋಸೆಯನ್ನೇ ಕಳುಹಿಸಿಕೊಡಲು ಆಗದವರು ಆಡಳಿತವನ್ನು ಇನ್ನು ಹೇಗೆ ನಡೆಸುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಇವತ್ತು ಕಾಂಗ್ರೆಸ್ ನಾಯಕರು ದೋಸೆ ಪಾರ್ಸೆಲ್ ಕಳುಹಿಸಿದ್ದಾರೆ. ದೋಸೆ ಕೊಡಲು ಹೋದಾಗ ಡೆಲಿವರಿ ಬಾಯ್ ನನ್ನು ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮುಂಜಾಗೃತಾ ಕ್ರಮವಾಗಿ ಗಿರಿನಗರ ಪೊಲೀಸರು ಮೂವರನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ವಿನೋದ್ ಕುಮಾರ್, ವಿಶ್ವನಾಥ್ ಹಾಗೂ ನೂರ್ ಸಿಂಗ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.