ಬೆಂಗಳೂರು: 2022 ನೇ ವರ್ಷವು ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ವರ್ಷವಾಗಿದ್ದು, ಅನೇಕ ಗಮನಾರ್ಹ ಸಾಧನೆಗಳಾಗಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ವರ್ಷದ ಸಾಧನೆಗಳ ಮಾಹಿತಿಯನ್ನು ಸಚಿವರು ಹಂಚಿಕೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಎಲ್ಲರಿಗೂ ಆರೋಗ್ಯದ ಹಕ್ಕು ನೀಡಲಾಗಿದೆ. ಕರ್ನಾಟಕವು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಆರೋಗ್ಯ ವಲಯದಲ್ಲಿ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಯಾವುದೇ ರಾಜ್ಯದ ಆರೋಗ್ಯದ ಮಾನದಂಡ ಅಳೆಯಲು ತಾಯಿ ಮತ್ತು ಶಿಶು ಮರಣ ಅಳತೆಗೋಲು. ತಾಯಿ ಶಿಶು ಮರಣ ದರ ಶೇ 83 ರಿಂದ 69ಕ್ಕೆ, ಎನ್.ಎಫ್.ಎಚ್.ಎಸ್ -5 ವರದಿ ಪ್ರಕಾರ, ಜನನದ ಸಮಯದಲ್ಲಿ ಲಿಂಗಾನುಪಾತ 910 ರಿಂದ 978 ಕ್ಕೆ, ಶಿಶು ಮರಣ ದರ 21 ರಿಂದ 19ಕ್ಕೆ, ನವಜಾತ ಶಿಶುಗಳ ಮರಣ ದರ 16 ರಿಂದ 14ಕ್ಕೆ ತಗ್ಗಿದೆ. ಹೆರಿಗೆ ವಲಯದಲ್ಲೂ ಸುಧಾರಣೆಯಾಗಿದ್ದು, 97% ರಷ್ಟು ಸಾಂಸ್ಥಿಕ ಹೆರಿಗೆಗಳು ದಾಖಲಾಗಿರುವುದು ಮಹತ್ವದ ಸಂಗತಿ. ʼಕಿವುಡ ಮುಕ್ತ ಕರ್ನಾಟಕʼದಡಿ ನವಜಾತ ಶಿಶುಗಳಲ್ಲಿ ಶ್ರವಣದೋಷ ಪತ್ತೆ ಮಾಡಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲಾಗುತ್ತಿದೆ ಎಂದರು.
ಲಕ್ಷ್ಯ ಕಾರ್ಯಕ್ರಮದಡಿ 68% ಆಸ್ಪತ್ರೆಗಳಿಗೆ ಮಾನ್ಯತೆ ನೀಡಿ, 55 ಸೌಲಭ್ಯಗಳನ್ನು ರಾಷ್ಟ್ರ ಮಟ್ಟದಲ್ಲಿ ಪ್ರಮಾಣೀಕರಿಸಲಾಗಿದೆ. 42,524 ಆಶಾ ಕಾರ್ಯಕರ್ತೆಯರಿಗೆ ಮಂಜೂರಾತಿ, ವಿಶ್ವ ಆರೋಗ್ಯ ಸಂಸ್ಥೆ ಪೋರ್ಟಲ್‌ನಲ್ಲಿ ಅನುಷ್ಠಾನ ಮತ್ತು ವರದಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಇ-ಸಂಜೀವಿನಿ ಟೆಲಿ-ಮೆಡಿಸಿನ್ ಸಮಾಲೋಚನೆಯಡಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಹೊರರೋಗಿ ಮಾದರಿಯ ಟೆಲಿ-ಸಮಾಲೋಚನೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ನವೆಂಬರ್‌ವರೆಗೆ 61.99 ಲಕ್ಷ ಟೆಲಿ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಡಿ.ಎನ್.ಬಿ ಕೋರ್ಸ್‌ಗಳನ್ನು, ತಾಲ್ಲೂಕು ಆಸ್ಪತ್ರೆಗಳಲ್ಲಿ ಡಿ.ಎನ್.ಬಿ ಮತ್ತು ಡಿಪ್ಲೋಮಾ ಕೋರ್ಸ್‌ಗಳನ್ನು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. 2020-21 ರಲ್ಲಿ ಕಾಯಕಲ್ಪ ಪ್ರಶಸ್ತಿಯನ್ನು 8 ಎಚ್.ಡಬ್ಲ್ಯೂ.ಸಿಗಳು ಮೊದಲ ಬಾರಿಗೆ ಪಡೆದಿದ್ದು, ರಾಷ್ಟ್ರಮಟ್ಟದಲ್ಲಿ ಎನ್.ಕ್ಯೂ.ಎ.ಎಸ್ ಪ್ರಕಾರ ಒಟ್ಟು 51 ಸಾರ್ವಜನಿಕ ಆರೋಗ್ಯ ಸೌಲಭ್ಯ ಕೇಂದ್ರಗಳನ್ನು ಪ್ರಮಾಣೀಕರಿಸಲಾಗಿದೆ ಎಂದರು.