ವಿಜಯಪುರ: ಭೂಮಿಯನ್ನೇ ನಂಬಿ ಬದುಕುವ ರೈತರಿಗೆ ಬೆಳೆ ಕೈಕೊಟ್ಟಾಗ, ಚಿಂತೆಯೊಂದೆ ಅವರ ದಾರಿಯಾಗಿ ಬಿಡುತ್ತದೆ. ಹಗಲು ರಾತ್ರಿಯೆನ್ನದೆ ಬೆಳೆಗಾಗಿ ಸಮಯ ಕೊಟ್ಟು, ಶ್ರಮವಹಿಸಿ ಬೆಳೆದ ಬೆಳೆ ಕೈಸೇರದೆ ಹೋದಾಗ ಆ ನೋವಲ್ಲೇ ಅದೆಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೋಗ ವಿಜಯಪುರದಲ್ಲೂ ಅಂಥದ್ದೇ ಘಟನೆ ನಡೆದಿದೆ.
ಮನೋಹರ್ ಆಯತವಾಡ ಎಂಬ ರೈತ ಕಷ್ಟಪಟ್ಟು, ಸಾಲ ಸೋಲ ಮಾಡಿ ದ್ರಾಕ್ಷಿ ಬೆಳೆಯನ್ನು ಬೆಳೆದಿದ್ದ. 55 ವರ್ಷ ವಯಸ್ಸಲ್ಲೂ ಆ ಬೆಳೆಗಾಗಿ ಶ್ರಮವಹಿಸಿದ್ದರು. ಬೆಳೆಯೂ ತುಂಬಾ ಚೆನ್ನಾಗಿ ಬಂದಿತ್ತು. ಬೆಳೆ ನೋಡಿ ಖುಷಿ ಪಟ್ಟಿದ್ದರು. ಸಾಲ ಎಲ್ಲಾ ತೀರುತ್ತೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಮಾರುಕಟ್ಟೆಗೆ ದ್ರಾಕ್ಷಿಯನ್ನು ಸಾಗಿಸಿದರೆ ಒಳ್ಳೆ ಲಾಭ ಬರುತ್ತೆ ಎಂದು ಭರವಸೆ ಇಟ್ಟುಕೊಂಡಿದ್ದ ರೈತ ಇಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮನೋಹರ್ ಆಯತವಾಡ, ಸಂಪಾಗಿ ಬೆಳೆದ ದ್ರಾಕ್ಷಿ ಬೆಳೆಗೆ ಅವೈಜ್ಞಾನಿಕವಾಗಿ ಗೊಬ್ಬರ ಹಾಕಿದ್ದಾರೆ. ಇದರಿಂದ ನೋಡ ನೋಡುತ್ತಲೇ ದ್ರಾಕ್ಷಿ ಬೆಳೆ ಒಣಗಿ ಹೋಗಿದೆ. ಇದರಿಂದ ರೈತ ಮನೋಹರ್ ಕಂಗಲಾಗಿದ್ದಾರೆ. ಯಾಕಂದ್ರೆ ದ್ರಾಕ್ಷಿ ಬೆಳೆಗೆ ಅಂತ ಐದು ಲಕ್ಷ ಸಾಲ ಮಾಡಿಕೊಂಡಿದ್ದರಂತೆ. ದ್ರಾಕ್ಷಿ ಬೆಳೆಯೂ ಇಲ್ಲ, ಸಾಲ ತೀರಿಸುವ ಮಾರ್ಗವೂ ಕಾಣದೆ ತೋಟದ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.