ಸುದ್ದಿಒನ್

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಮತ್ತೆ ನ್ಯಾಯಾಲಯದ ಸಂಕಷ್ಟಗಳು ಎದುರಾಗಿವೆ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಬಗ್ಗೆ ಅನುಚಿತ ಹೇಳಿಕೆ ನೀಡಿದ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಗೈರುಹಾಜರಿಯನ್ನು ಲಕ್ನೋ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ನ್ಯಾಯಾಧೀಶರು ಅವರಿಗೆ 200 ರೂ. ದಂಡ ವಿಧಿಸಿ ಏಪ್ರಿಲ್ 14 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ವೀರ್ ಸಾವರ್ಕರ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಲಕ್ನೋ ನ್ಯಾಯಾಲಯವು ರಾಹುಲ್ ಗಾಂಧಿಗೆ ಈಗಾಗಲೇ ಹಲವಾರು ಬಾರಿ ಸಮನ್ಸ್ ಜಾರಿ ಮಾಡಿ, ನ್ಯಾಯಾಲಯದ ಮುಂದೆ ಹಾಜರಾಗಲು ಆದೇಶಿಸಲಾಗಿತ್ತು. ಆದರೂ ಅವರು ಹಾಜರಾಗದೇ ಇದ್ದ ಕಾರಣದಿಂದಾಗಿ ಕೋರ್ಟ್ ದಂಡ ವಿಧಿಸಿದೆ.

2022 ರ ಮಹಾರಾಷ್ಟ್ರ ಚುನಾವಣಾ ಪ್ರಚಾರದ ಸಮಯದಲ್ಲಿ ರಾಹುಲ್ ಗಾಂಧಿಯವರು ಸಾವರ್ಕರ್ ಬಗ್ಗೆ ನೀಡಿದ ಹೇಳಿಕೆಯ ಮೇಲೆ ಈ ಪ್ರಕರಣ ದಾಖಲಾಗಿತ್ತು. ರಾಹುಲ್ ಗಾಂಧಿಯವರು ಸಾವರ್ಕರ್ ಅವರನ್ನು ಬ್ರಿಟಿಷರ ಸೇವಕ ಎಂದು ಟೀಕೆ ಮಾಡಿದ್ದರು. ಅವರ ಈ ಹೇಳಿಕೆಗಳು ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ರಾಹುಲ್ ಗಾಂಧಿ ಇತಿಹಾಸವನ್ನು ತಿರುಚಿದ್ದಾರೆ ಮತ್ತು ಸಾವರ್ಕರ್ ಅವರಂತಹ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರನ್ನು ಅಗೌರವಿಸಿದ್ದಾರೆ ಎಂಬ ಟೀಕೆ ಇತ್ತು. ರಾಹುಲ್ ಅವರು ನೀಡಿದ ಈ ಹೇಳಿಕೆಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.
ನೃಪೇಂದ್ರ ಪಾಂಡೆ ಎಂಬ ವಕೀಲರು ನೀಡಿದ ದೂರಿನ ಮೇರೆಗೆ ಲಕ್ನೋದಲ್ಲಿ ಪ್ರಕರಣ ದಾಖಲಾಗಿದೆ. ಸಿಆರ್‌ಪಿಸಿಯ ಸೆಕ್ಷನ್ 156(3) ರ ಅಡಿಯಲ್ಲಿ ಪಾಂಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ಗಾಂಧಿಯವರ ವರ್ತನೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿತು. ಏಪ್ರಿಲ್ 14 ರಂದು ರಾಹುಲ್ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯ ಎಚ್ಚರಿಸಿದೆ.

