ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ. (ನ.01) : ತಾಯಿಯ ಮೇಲಿನ ಪ್ರೀತಿ ವಾತ್ಸಲ್ಯ ಹೇಗಿದೆಯೋ ಹಾಗೇ ತಾಯ್ನಾಡಿನ ಭಾಷೆಯ ಬಗ್ಗೆ ಪ್ರೀತಿ, ವಾತ್ಸಲ್ಯ ನಮ್ಮಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ನಮ್ಮ ನಾಡು ಪ್ರಕಾಶಮಾನವಾಗಿ ಬೆಳಗಲಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದರು.
ದೇಶ ಕಟ್ಟುವ, ನಾಡು ಕಟ್ಟುವ ಮತ್ತು ಸಾಮರಸ್ಯಯುತ ಸಂಬಂಧಗಳನ್ನು ಬೆಸೆಯುವ ಸವಾರ್ಂಗೀಣ ಅಭಿವೃದ್ಧಿ ಸಾಧ್ಯವಾಗಿಸುವ ಕೆಲಸವನ್ನು ನಾವೆಲ್ಲಾ ಒಗ್ಗಟ್ಟಿನಿಂದ ಮಾಡಬೇಕಿದೆ. ಏಳು ದಶಕಗಳು ಕಳೆಯುತ್ತಾ ಬಂದರೂ ನಾಡು-ನುಡಿಗೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳು ಹಾಗೆಯೇ ಉಳಿದಿವೆ. ಕೆಲವೂ ಇನ್ನು ಹೆಚ್ಚು ಗಂಭೀರವಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಗಡಿ ವಿವಾದ., ನೆರೆ ರಾಜ್ಯಗಳೊಂದಿಗಿನ ನೀರಿನ ಹಂಚಿಕೆ, ಮಣ್ಣಿನ ಮಕ್ಕಳಿಗೆ ಉದ್ಯೋಗದ ಆದ್ಯತೆ, ಮಾತೃಭಾಷೆಯಲ್ಲಿ ಶಿಕ್ಷಣ ಮುಂತಾದವುಗಳು ಸವಾಲುಗಳಾಗಿಯೇ ಮುಂದುವರಿದಿವೆ. ಕನ್ನಡ ನಾಡು. ಕಟ್ಟುವುದರೆಂದರೆ ನಮ್ಮನ್ನು ಕಟ್ಟಿಕೊಳ್ಳುತ್ತಲೇ ಕನ್ನಡದ ಎಲ್ಲಾ ಮನಸ್ಸು. ಹೃದಯಗಳನ್ನು ಬೆಸೆಯುವಂತಹದಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಏಕೀಕರಣಕ್ಕೆ ತಮ್ಮ ತನು-ಮನಗಳನ್ನು ಪಣಕ್ಕಿಟ್ಟು ದುಡಿದು ದಣಿದ ದಿವ್ಯ ಚೇತನರು ಮತ್ತು 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವನ್ನಾಗಿ ಮಾಡಿದ ಅಂದಿನ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸು ಅವರ ನುಡಿ, ನೆಲ ಮತ್ತು ಸಂಸ್ಕøತಿಯ ಬಗೆಗಿನ ಭಾವನಾತ್ಮಕ ಪ್ರೇರಣೆ, ನಾಡುಕಟ್ಟುವ ಸಂಘಟಿತ ಪ್ರಯತ್ನಗಳಿಂದಾಗಿಯೇ ನಾವಿಂದು ಸ್ವಾಭಿಮಾನಿ ಕನ್ನಡದ ಪ್ರಜೆಗಳಾಗಿದ್ದೇವೆ. ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದೇವೆ. ಬಸವಾದಿ ಶರಣರು ಕಟ್ಟಿದ ಅನುಭವ ಮಂಟಪ ಮತ್ತು ಪ್ರಜಾಸತ್ತಾತ್ಮಕ ಕಲ್ಯಾಣ ರಾಜ್ಯದ ವಾರಸುದಾರರಾಗಿದ್ದೇವೆ. ಮುಂದಿನ ದಿನಗಳಲ್ಲಿಯೂ ನಾವು ಈ ಅಸ್ಮಿತೆಗಳನ್ನು ಶ್ರೇಷ್ಠ ಸಾಂಸ್ಕøತಿಕ ಮೌಲ್ಯಗಳನ್ನು, ಕಲ್ಯಾಣ ರಾಜ್ಯದ ಆದರ್ಶಗಳನ್ನು ಇವತ್ತಿನ ಭಾರತೀಯ ಸಂವಿಧಾನದ ಆಶಯದ ಬೆಳಕಿನಲ್ಲಿ ಬಿತ್ತಿ ಬೆಳೆಯುವ ಮೂಲಕ ದೇಶಕ್ಕೆ ಹಾಗೂ ವಿಶ್ವಕ್ಕೆ ಮಾದರಿಯಾಗುವ ಕನಸುಗಳನ್ನು ನಿತ್ಯವೂ ವಾಸ್ತವಗೊಳಿಸುವ ಕರ್ತವ್ಯದಲ್ಲಿ ವೇಗವಾಗಿ ಹೆಜ್ಜೆ ಹಾಕಬೇಕಾಗಿದೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ನಾವು ಸಾಕಷ್ಟು ಮುಂದುವರೆದಿದ್ದೇವೆ. ಕೃಷಿ-ಕೈಗಾರಿಕೆ-ಸೇವಾ ವಲಯಗಳಲ್ಲಿ ಬಹಳಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ನೀರಾವರಿ ಪ್ರದೇಶ ವಿಸ್ತಾರಗೊಂಡಿದೆ. ಚಿತ್ರದುರ್ಗ ಜಿಲ್ಲೆಯ ಬಹುದಿನಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡು ಬರದ ನಾಡು ಹಸಿರುನಾಡಾಗುವ ದಿನಗಳು ಕ್ಷಣಗಣನೆಯಲ್ಲಿವೆ ಎಂದರು.
ರಾಜ್ಯದಲ್ಲಿ ಸುಸ್ಥಿರ ಆಡಳಿತ ನೀಡುವ ದೃಷ್ಟಿಯಿಂದ, ಸುಮಧುರ ಸಾಮಾಜಿಕ ಬದುಕನ್ನು ಎಲ್ಲ ಜನವರ್ಗಗಳಿಗೆ ಕಟ್ಟಿಕೊಡುವ ಹೊಣೆಗಾರಿಕೆಯನ್ನು ಕರ್ನಾಟಕದ ಜನರು ನಮಗೆ ನೀಡಿದ್ದಾರೆ. ಐದು ಪ್ರಮುಖ ಭಾಗ್ಯ ಯೋಜನೆಗಳನ್ನೂ ಒಳಗೊಂಡಂತೆ ಚುನಾವಣೆ ಸಂದರ್ಭದಲ್ಲಿ ನೀಡಿರುವ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸಲು ವಿವಿಧ ಯೋಜನೆಗಳನ್ನು ಹಾಕಿಕೊಂಡು ಕಾಲಮಿತಿಯಲ್ಲಿ ಈಡೇರಿಸಲು ಕ್ರಮ ಕೈಗೊಂಡಿದ್ದೇವೆ. ಸರ್ವೋದಯ ನಮ್ಮ ಅಭಿವೃದ್ಧಿಯ ಸೂತ್ರವಾಗಿದ್ದು, ಸಾಮಾಜಿಕ ಶಾಂತಿ, ಸಾಮರಸ್ಯ ಬದುಕಿನ ಅನುಷ್ಠಾನದ ಆಡಳಿತ ಸೂಚಿಯಾಗಿದೆ. ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ಜಾತಿ-ವರ್ಗಗಳು ಮಹಿಳೆಯರು, ಮಕ್ಕಳು ಹಾಗೂ ವಿಕಲಚೇತನರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಇಂದು ನಮ್ಮ ಕನ್ನಡ ಬಂಧುಗಳು ವಿಶೇಷವಾಗಿ ಯುವ ಪ್ರತಿಭೆಗಳು ಜಗತ್ತಿನಾದ್ಯಂತ ಕನ್ನಡದ ಜ್ಯೋತಿಯನ್ನು ಹಚ್ಚುತ್ತಿದ್ದಾರೆ, ಕನ್ನಡ ನೆಲದ ಮೂಲದ ಕಂಪನವನ್ನು ಬಿತ್ತುತ್ತಿದ್ದಾರೆ, ಬೀರುತ್ತಿದ್ದಾರೆ “ಉದಯವಾಗಲಿ ನಮ್ಮ ಚಲುವ ಕನ್ನಡನಾಡು” ಎಂದು ಆರಂಭವಾದ ಕನ್ನಡನಾಡು ನುಡಿಕಟ್ಟುವ ಕೆಲಸ “ಇವನಾರವ ಇವನಾರವ ಎಂದೆನಿಸದೆ, ಇವ ನಮ್ಮವ ಇವ ನಮ್ಮವ ಎಂದೆವಿಸುತ್ತಾ” ಎಲ್ಲಾ ಜಾತಿ ಜನಾಂಗಗಳು ಅರಿಸಿನ ಕುಂಕುಮವಿಟ್ಟು ಬಾಗೀನ ಕೊಡುವಂತೆ, ಹಳದಿ ಕೆಂಪು ಬಣ್ಣದ ಬಾವುಟವನ್ನು ಜಗತ್ತಿನಾದ್ಯಂತ ಹಾರಿಸುವ ಮೂಲಕ, ನರನಾಡಿಗಳನ್ನು ಹೊಸೆದು, ಬೌದ್ದಿಕ ಶಕ್ತಿಯ ಜ್ಯೋತಿಯ ಮುಟ್ಟಿಸಿ, ಹಚ್ಚಿ ಬೆಳಗಿಸುತ್ತಿರುವ ಕನ್ನಡದ ದೀಪ ಕತ್ತಲ ಜಗತ್ತಿಗೆ ಬೆಳಕು ನೀಡುವಂಥಹುದಾಗಿದೆ “ಹೊಸ ನೆತ್ತರುಕ್ಕಿ ಆರಿಹೋಗದ ಮುನ್ನ, ಕಟ್ಟೋಣ ಬನ್ನಿ ಹೊಸ ನಾಂಡೊಂದನ್ನು ರಸದ ಬೀಡೊಂದನ್ನು” ಎಂದು ಕನ್ನಡದ ಮರಿ ಸಿಂಹಗಳನ್ನು ಬಡಿದೆಬ್ಬಿಸುವ, ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮೂಲಕ, ಕನ್ನಡ ಭಾಷೆ ಮತ್ತು ಸಂಸ್ಕೃತಿಗಳು ನಮ್ಮ ಮೂಲ ಸಂಸ್ಕೃತಿ ಎನ್ನುವುದನ್ನು, ಸ್ವಾವಲಂಬಿ ಸ್ವಾಭಿಮಾನದ ಬದುಕಿನ ಮೂಲ ಸೆಲಗಳೆನ್ನುವುದನ್ನು ಮನದಟ್ಟು ಮಾಡಿಕೊಡಬೇಕಿದೆ. ಸದಭಿರುಚಿಯ ಪ್ರೇರಣೆಗಳು ಮಾತ್ರ ಸುಂದರ ಬದುಕನ್ನು ಕಟ್ಟಿಕೊಡಬಲ್ಲವು ಎನ್ನುವುದನ್ನು ಸಾಬೀತುಪಡಿಸಬೇಕಿದೆ. ಅದಕ್ಕಾಗಿ ಅಗತ್ಯವಿರುವ ಶಿಕ್ಷಣ, ಸಾಹಿತ್ಯ, ಕಲೆ, ಕೌಶಲ್ಯಗಳನ್ನು ಅನ್ವೇಷಿಸಿ, ಅನುಷ್ಟಾನಗೊಳಿಸುವ ಸಾಮೂಹಿಕ ಪ್ರಯತ್ನಗಳು ಬೇಕಿವೆ ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ:
ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಂತ ಜೋಸೆಫ್ ಶಾಲೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಸಂಸ್ಕೃತಿ ಹಾಗೂ ಮಹತ್ವ ಸಾರುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
‘ಅವ್ವ ಕಣೋ ಕನ್ನಡ, ನಮ್ ಜೀವ ಕಣೋ ಕನ್ನಡ’, ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’, ‘ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ’ ಚಿತ್ರಗೀತೆಗಳಿಗೆ ಅಮೋಘ ಎನಿಸುವ ರೀತಿಯಲ್ಲಿ ವಿದ್ಯಾರ್ಥಿಗಳು ಭಾವಾಭಿನಯದೊಂದಿಗೆ ನೃತ್ಯ ಪ್ರದರ್ಶಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 28 ಮಂದಿ ಸಾಧಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸನ್ಮಾನಿಸಿದರು.
ಕನ್ನಡಾಂಭೆಗೆ ನುಡಿನಮನ : ಕರ್ನಾಟಕಕ್ಕೆ 50ರ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಾಡಿನ ಹೆಸರಾಂತ 05 ಕವಿಗಳು ರಚಿಸಿರುವ ಗೀತೆಗಳನ್ನು ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಕಲಾವಿದರು ಹಾಡಿದರು.
ಹುಯಿಲಗೋಳ ನಾರಾಯಣರಾಯರು ರಚಿಸಿರುವ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”, ಕುವೆಂಪು ರಚಿತ “ಎಲ್ಲಾದರು ಇರು ಎಂತಾದರು ಇರು”, ದ.ರಾ.ಬೇಂದ್ರ ರಚಿಸಿರುವ “ಒಂದೇ ಒಂದೇ ಕರ್ನಾಟಕ ಒಂದೇ”, ಸಿದ್ದಯ್ಯ ಪುರಾಣಿಕರು ರಚಿಸಿರುವ “ಹೊತ್ತಿತೋ ಹೊತ್ತಿತು ಕನ್ನಡದ ದೀಪ”, ಹಾಗೂ ಚನ್ನವೀರ ಕಣವಿ ಅವರು ಬರೆದಿರುವ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ 05 ಗೀತೆಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕಲಾವಿದರು ತಂಡವು ಗೀತ ಗಾಯನ ಪ್ರಸ್ತುತ ಪಡಿಸಿತು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ತಹಶೀಲ್ದಾರ್ ನಾಗವೇಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು. ಶಿವರಾಂ ಹಾಗೂ ಗಣೇಶಯ್ಯ ಅವರು ಕಾರ್ಯಕ್ರಮದ ನಿರೂಪಣೆ ನಿರ್ವಹಿಸಿದರು.