ಬೆಳಗಾವಿ: ಇಂದಿನಿಂದ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನಕ್ಕೆ ಹೋಗುವ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಶಾಸಕಿ ಅಂಜಲಿ ಲಿಂಬಾಳ್ಕರ್ ಜೊತೆ ಪಾದಯಾತ್ರೆಯಲ್ಲಿ ಗಮನ ಸೆಳೆದರು.
ಇದೇ ವೇಳೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರುವ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಸಂವಿಧಾನದ ಪ್ರಕಾರ ಯಾರಾದರೂ ಒಂದು ಧರ್ಮವನ್ನು ಇಷ್ಟಪಟ್ಟು ಅನುಕರಣೆ ಮಾಡ್ತೀವಿ ಅಂದ್ರೆ ಅದಕ್ಕೆ ಅನುಮತಿ ಇದೆ. ಯಾರನ್ನು ಬಲವಂತವಾಗಿ ಮತಾಂತರ ಮಾಡಬಾರದು ಅಷ್ಟೆ ಎಂದಿದ್ದಾರೆ.
ಬಲವಂತವಾಗಿ ಮತಾಂತರ ಮಾಡಬಾರದು ಅಂತ ಇದೆ. ಹೀಗಿದ್ದರು ಈ ಕಾಯ್ದೆ ತರುವ ಅಗತ್ಯವೇನಿದೆ. ಬಿಜೆಪಿಯವರು ದುರುದ್ದೇಶದಿಂದ ಕಾಯ್ದೆ ಜಾರಿಗೆ ತರಲು ಹೊರಟಿದ್ದಾರೆ. ನಾವೂ ಇದಕ್ಕೆ ಒಪ್ಪಿಗೆ ನೀಡಲ್ಲ ಎಂದಿದ್ದಾರೆ.
ಇನ್ನು ಒಂದು ಸಮುದಾಯದ ಬಗ್ಗೆ ಕೈ ನಾಯಕರು ಮಾತನಾಡುತ್ತಿದ್ದಾರೆಂಬ ಬಿಜೆಪಿ ಆರೋಪಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ, ನಾವೂ ಕೇವಲ ಒಂದು ಸಮುದಾಯ, ಧರ್ಮದ ಪರ ಇದ್ದೇವೆಂದು ಹೇಳುವುದು ಸರಿಯಲ್ಲ. ನಾವೂ ಎಲ್ಲರ ಪರವಾಗಿಯೂ ಇದ್ದೇವೆ. ಜಾತ್ಯತೀತತೆಯ ಬಗ್ಗೆ ನಂಬಿಕೆ ಇಟ್ಟವರು. ಜನ ಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಅವರ ಪರ ಮಾತಾಡುತ್ತೇವೆ. ಪ್ರವಾಹದ ಬಗ್ಗೆ ಮಾತಾಡುತ್ತೇವೆ. ಪರ್ಸಂಟೇಜ್ ಬಗ್ಗೆಯೂ ಮಾತಾಡುತ್ತೇವೆ ಎಂದಿದ್ದಾರೆ.