ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ, (ಜೂ.16) : ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ ಹತಾಶರಾಗಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಡುಕ ಹುಟ್ಟಿದೆ ಎಲ್ಲ ಭರವಸೆ ಈಡೇರಿಸುತ್ತೇವೆ. ಮುಂದೆ ಯಾವ ಚುನಾವಣೆ ಗೆಲ್ಲಲು ಸಾಧ್ಯ ಇಲ್ಲ ಎಂದು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ನಗರದ ಹೂರ ವಲಯದ ಬೋವಿ ಗುರು ಪೀಠಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಧಮ್ ತಾಕತ್ತು ಇದ್ರೆ ಗ್ಯಾರಂಟಿಗಳನ್ನು ಯಾವುದೇ ಷರತ್ತು ಇಲ್ಲದೇ ಕೊಡಲಿ ಎಂಬ ಅಶೋಕರವರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಬಿಜೆಪಿಯವರು ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಪಡಿಸುವುದರ ಮೂಲಕ ಮಿನಿ ಪಾಕಿಸ್ಥಾನ ಮಾಡಲಿಕ್ಕೆ ಹೊರಟಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ ಬಿಜೆಪಿಯವರು ಈ ರೀತಿ ಕೋಮು ದ್ವೇಷ ಸೃಷ್ಟಿಸಿ ಅಧಿಕಾರ ನಡೆಸಲು ಹೋದರು ಜನರು ಅದಕ್ಕೆ ತಕ್ಕಪಾಠ ಕಲಿಸಿದ್ದಾರೆ. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಇದನ್ನು ಜನ ಅರ್ಥ ಮಾಡಿಕೊಂಡು ಪಾಠ ಕಲಿಸಿದ್ದಾರೆ ಎಂದು ಸಚಿವರು ನುಡಿದರು.
ಅರಣ್ಯ ಸಂರಕ್ಷಣೆ, ಜನರ ಸಮಸ್ಯೆ ಆಲಿಸುವ ಎರಡೂ ಜವಾಬ್ದಾರಿ ಇದೆ. ಸಣ್ಣ ಸಮುದಾಯಗಳು, ಬಡವರು, ಅರಣ್ಯಗಳ ಪ್ರದೇಶಗಳಲ್ಲಿ ಗುಡಿಸಲು, ಜಮೀನು ಇವೆ. ಕೇಂದ್ರ ಹಾಗೂ ರಾಜ್ಯದಿಂದ ಜಂಟಿ ಸಮೀಕ್ಷೆ ಆಗಬೇಕು. ಕೆಲ ಜಿಲ್ಲೆಗಳಲ್ಲಿ ಪ್ರಸ್ತಾವನೆ ಹೋಗಿದೆ. ಕಾಲಾವಕಾಶ ಬೇಕಾಗುತ್ತದೆ. ಅರಣ್ಯ ಸಂರಕ್ಷಣೆ, ಅತಿಕ್ರಮಣ ತೆರವುಗೊಳಿಸುವ ಮೂಲಕ ಪರಿಸರ ಉಳಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ.
ಈ ವರ್ಷ 5 ಕೋಟಿ ಸಸಿಗಳನ್ನು ನೆಡಬೇಕು. ರಾಜ್ಯದಲ್ಲಿ 21% ಅರಣ್ಯ ಇದೆ.ಅದನ್ನು 31% ಗೆ ತೆಗೆದುಕೊಂಡು ಹೋಗಬೇಕಿದೆ. ಕಾಯ್ದೆಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಿ ಪಶು ಸಂಕುಲ ಉಳಿಸುವ ಕೆಲಸ ಮಾಡುತ್ತಿದ್ದೇವೆ. ಶ್ರೀಗಂಧ ಬೆಳೆಯ ಎಲ್ಲಾ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಡುತ್ತೇನೆ.
ಮೀಸಲು ಅರಣ್ಯ ಇರುವ ಕಡೆಗಳಲ್ಲಿ ಅರಣ್ಯ ಉಳಿಸಲು ಮುಂದಾಗಿದ್ದೇವೆ. ಬಡವರು, ಬುಡಕಟ್ಟು ಸಮುದಾಯಗಳು ನಾಲ್ಕೈದು ದಶಕಗಳಿಂದ ಅಲ್ಲೆ ವಾಸ ಮಾಡುತ್ತಿದ್ದರೆ ಸರಿಯಾದ ಸಮೀಕ್ಷೆ ಮಾಡದೆ ಜನ ಕಷ್ಟ ಅನುಭವಿಸುತ್ತಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಮಾಡಿ ಸರಿಯಾದ ವರದಿ ಕೊಟ್ಟಿಲ್ಲ. ಹೀಗಾಗಿ ಗಡುವು ನೀಡಿ ಸಮೀಕ್ಷೆ ಮಾಡಲು ಆದೇಶ ಮಾಡುತ್ತಿದ್ದೇನೆ ವರದಿ ತರಿಸಿ ನ್ಯಾಯ ಕೊಡುವ ಕೆಲಸ ಮಾಡುತ್ತೇವೆ.
ನಮ್ಮ ಕುಟುಂಬಕ್ಕೂ ಮಠಕ್ಕೂ ಅವಿನಾಭಾವ ಸಂಬಂಧ. ಗುರುಗಳ ಜೊತೆಗೆ ಇಪ್ಪತ್ತು ವರ್ಷಗಳಿಂದ ಸಂಪರ್ಕ ಇದೆ. ಶಕ್ತಿ ಯೋಜನೆಯಲ್ಲಿ ಖಾಸಗಿ ವಾಹನದವರಿಗೆ ಸಂಕಷ್ಟ ಎದುರಾಗಿದ್ದರೆ ಕರೆದು ಚರ್ಚಿಸುತ್ತೇವೆ. ತಾತ್ಕಾಲಿಕ ಹಿನ್ನಡೆಯಷ್ಟೇ. ಆನಂತರ ಸರಿಯಾಗುತ್ತದೆ ಎಂದರು.