ಹಾವೇರಿ : ಕೆಲವೊಮ್ಮೆ ಎಷ್ಟೇ ದೊಡ್ಡ ಅಧಿಕಾರದಲ್ಲಿದ್ದರು ಮನುಷ್ಯ ಭಾವನಾತ್ಮಕವಾಗುವ ಸನ್ನಿವೇಶ ಹುಟ್ಟಿಕೊಳ್ಳುತ್ತದೆ. ಆದ್ರೂ ಒಮ್ಮೊಮ್ಮೆ ಈ ಅಧಿಕಾರ ಅನ್ನೋದು ಆ ಭಾವುಕತೆಯನ್ನ ತಡೆದು ಬಿಡುತ್ತೆ. ಅಂಥದ್ದೆ ಸನ್ನಿವೇಶ ಸಿಎಂ ಬೊಮ್ಮಾಯಿ ಅವರಿಗೂ ಎದುರಾಗಿತ್ತು.
ಶಿಗ್ಗಾಂವಿಯಲ್ಲಿ ಚೆನ್ನಮ್ಮ ಮೂರ್ತಿ ಅನಾವರಣ ಸಮಾರಂಭ ನಡೆಯಿತು. ಈ ವೇಳೆ ಮೂರ್ತಿ ಅನಾವರಣ ಮಾಡಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಕೆಲವು ಊರುಗಳಿಗೆ ತನ್ನದೇ ಆದ ಐತಿಹಾಸಿಕ ಕುರುಹುಗಳಿರುತ್ತವೆ. ಇದು ಸಂತರ ನಾಡು. ಈ ವೈಚಾರಿಕತೆ ಹಿಡಿದುಕೊಂಡು ಎಲ್ಲರೂ ಒಂದುಗೂಡಿ ಕೆಲಸ ಮಾಡಿದರೆ ಗೆಲುವು,ಇಲ್ಲದಿದ್ದರೆ ಕಷ್ಟ.
ಯಾವುದೂ ಶಾಶ್ವತ ಅಲ್ಲ. ಬದುಕೇ ಶಾಶ್ವತ ಅಲ್ಲ. ಈ ಸ್ಥಾನಮಾನಗಳೂ ಶಾಶ್ವತ ಅಲ್ಲ. ಈ ಅರಿವು ನಮಗೆ ಪ್ರತಿ ಕ್ಷಣ ಇರಬೇಕು. ನಿಮ್ಮ ಆಶೀರ್ವಾದಿಂದ ನಾನು ಸಿಎಂ ಆಗಿದ್ದೇನೆ. ಈ ಕ್ಷೇತ್ರದ ಹೊರಗೆ ನಾನು ಗೃಹ ಮಂತ್ರಿ, ನೀರಾವರಿ ಸಚಿವ , ಸಿಎಂ. ಆದರೆ ಶಿಗ್ಗಾವಿಗೆ ಬಂದಾಗ ಬರೀ ಬಸವರಾಜ ಬೊಮ್ಮಾಯಿ ಅಷ್ಟೆ.
ಇಲ್ಲಿ ಬಸವರಾಜ ಬೊಮ್ಮಾಯಿ ಅನ್ನೋದಷ್ಟೆ ಶಾಶ್ವತ, ಉಳಿದೆಲ್ಲಾ ಅಧಿಕಾರ ಪದವಿ ಶಾಶ್ವತ ಅಲ್ಲ. ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ, ನವಣಕ್ಕಿ ಅನ್ನ ಮಾಡಿ ತಿನಿಸಿದಿರಿ. ನಾನು ಅದನ್ನ ಮರೆಯೋಕೆ ಸಾಧ್ಯವಿಲ್ಲ ಎಂದು ಗದ್ಗದಿತರಾದ ಸಿಎಂ. ನಾನು ಭಾವನಾತ್ಮಕವಾಗಿ ಮಾತಾಡಬಾರದು ಅಂತ ಬಹಳ ಪ್ರಯತ್ನ ಮಾಡ್ತೀನಿ. ಆದರೆ ನಿಮ್ಮನ್ನು ನೋಡಿದಾಗ ಆ ಭಾವನೆ ಬರುತ್ತೆ. ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭಾವನಾತ್ಮಕವಾಗಿ ನುಡಿದಿದ್ದಾರೆ.