ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಅದ್ಧೂರಿ ಸ್ವಾಗತ : ನಮ್ಮ ಶಿಕ್ಷಕ ನಮ್ಮ ಹೆಮ್ಮೆ ಎಂದ ಗ್ರಾಮಸ್ಥರು

3 Min Read

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.08 :2023-24 ನೇ ಸಾಲಿನ ಕರ್ನಾಟಕ ಸರ್ಕಾರ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಕೆ.ಟಿ. ನಾಗಭೂಷಣ್ ರವರಿಗೆ ವಿದ್ಯಾರ್ಥಿಗಳಿಂದ   ಹೂವಿನ ಮಳೆ ಸುರಿಯುವ ಮೂಲಕ   ಹಾಗೂ ಡೊಳ್ಳು ಕುಣಿತ ದ ಮೂಲಕ ತಮ್ಮ ಶಿಕ್ಷಕರನ್ನು ಅದ್ದೂರಿಯಾಗಿ ಶಾಲೆಗೆ ಸ್ವಾಗತಿಸಿ ಬರಮಾಡಿಕೊಂಡರು.

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿಯ ಸರ್ಕಾರಿ  ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ,ಶಾಲಾ ಸಿಬ್ಬಂದಿ ಸೇರಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಈ ಸಂಧರ್ಭದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರು ಇಡೀ ರಾಜ್ಯಕ್ಕೆ ನಮ್ಮ ಊರಿನ ಹೆಸರನ್ನು ಪ್ರಖ್ಯಾತಿಗೊಳಿಸಿದ್ದಾರೆ. ನಮ್ಮ ಶಿಕ್ಷಕ ನಮ್ಮೂರಿನ ಹೆಮ್ಮೆ. ಹಾಗಾಗಿ ಈ ಸಂಧರ್ಭದಲ್ಲಿ ನಾವು ಅವರಿಗೆ ಇಡೀ ಊರಿನವರ ಪರವಾಗಿ ಅಭಿನಂದನೆ ಸಲ್ಲಿಸುವುದು ನಮ್ಮೆಲ್ಲರ ಹೊಣೆ ಎಂದು ನಿವೃತ್ತ ಪ್ರಾಧ್ಯಾಪಕ ಕೆ.ಸಿ.ತಿಪ್ಪೇಸ್ವಾಮಿ ಹೇಳಿದರು.

ಶಿಕ್ಷಕರು ವಿದ್ಯಾರ್ಥಿಯಲ್ಲಿ ಸೃಜನಾತ್ಮಕ ಕಲಿಕೆಯ ಗ್ರಹಿಕೆಯನ್ನು ಹೆಚ್ಚಿಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಮತ್ತು ಶಿಕ್ಷಕರ ಸೇವೆ ಸಾರ್ಥಕವಾಗಬೇಕಾದರೆ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಶ್ರಮಿಸಬೇಕು ಎಂದು ಹೇಳಿದರು.

ನಮ್ಮ ಶಾಲೆಯ ಕೀರ್ತಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪಸರಿಸಿರುವ ಶಿಕ್ಷಕ ನಾಗಭೂಷಣ್ ಇವರ ಬೋಧನಾ ವಿಧಾನ,ಶಿಸ್ತು, ಬದ್ಧತೆ,ಸಮಯ ಪ್ರಜ್ಞೆ, ಶಾಲೆಯಲ್ಲಿ ಬಹು ಮುಖಿಯಾಗಿ ಮಾಡುವ ಅವರ ಕಾರ್ಯ ವೈಖರಿ ಹಾಗೂ ಸರಳತೆ ಖಂಡಿತ ನಮ್ಮ ಊರಿಗೆ ಹಾಗೂ ಇತರ ಶಿಕ್ಷಕರಿಗೆ ಮಾದರಿಯಾಗಿದೆ. ಅವರಿಗೆ ಇಡೀ ಊರಿನ ಪರವಾಗಿ ಈ  ಮೂಲಕ ಅಭಿನಂದನೆಗಳನ್ನು  ಸಲ್ಲಿಸುತ್ತೇವೆ ಎಂದು ಹೊಗಳಿದರು.

ಮುಖ್ಯ ಶಿಕ್ಷಕ ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆ ಹಾಗೂ ಶಿಕ್ಷಕರ ಪರಿಶ್ರಮಗಳಿಂದ ಉತ್ತಮ ಶಿಕ್ಷಣ ನೀಡುವಲ್ಲಿ ಜಿಲ್ಲೆಯಲ್ಲಿ ಹೆಸರಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕ ನಾಗಭೂಷಣ್ ಒಬ್ಬ ಬಹುಮುಖ ಪ್ರತಿಭೆ. ನಮ್ಮ ಶಾಲೆ ಅಲ್ಲದೆ ಇಡೀ ಶಿಕ್ಷಕ ಇಲಾಖೆಗೆ ಆಸ್ತಿಯಂತೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಫಲವೇ ಅವರಿಗೆ ಸಂದ ಪ್ರಶಸ್ತಿಯಾಗಿದೆ. ಸಮುದಾಯದವರ ಸಹಭಾಗಿತ್ವ ಶಾಲಾಭಿವೃದ್ಧಿಗೆ ಉತ್ತಮವಾಗಿ ದೊರಕುತ್ತ ಬಂದಿದೆ. ಉತ್ತಮ ಶಿಕ್ಷಕರ ಬಳಗ ಇಲ್ಲಿದೆ .ಹಾಗಾಗಿ ಕೆಲಸ ಮಾಡಲು ಬಹಳ ಸಂತೋಷವಾಗುತ್ತಿದೆ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾಗಭೂಷಣ್ ಮಾತನಾಡಿ ಪ್ರಶಸ್ತಿಯನ್ನು ಪಡೆದ ಕ್ಷಣಗಳು ನನ್ನ ವೃತ್ತಿ ಜೀವನದ ಅವಿಸ್ಮರಣೀಯ, ನನ್ನ ವೃತ್ತಿ ಜೀವನದಲ್ಲಿ ಕೈಗೊಂಡ ನಿಸ್ವಾರ್ಥ ಸೇವೆ ಹಾಗೂ ನಿರಂತರ ಬೋಧನೆಯ ಪ್ರತಿಫಲದಿಂದ  ವಿದ್ಯಾರ್ಥಿ ಸ್ನೇಹಿ ಚಟುವಟಿಕೆಗಳಿಂದ  ಮಾಡಿದ ತರಗತಿ ಕೋಣೆಯ ಒಳಗಡೆ ಸಲ್ಲಿಸುತ್ತಿರುವ ಗಣನೀಯ ಸೇವೆಯನ್ನು  ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ ಕರ್ನಾಟಕ ಸರ್ಕಾರದ ಮಾನ್ಯ ಆಯುಕ್ತರಿಗೆ ಹಾಗೂ ಆಯ್ಕೆ ಸಮಿತಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ.

ವಿದ್ಯಾರ್ಥಿಗಳಿಂದ ನನ್ನ ವೃತ್ತಿ ಜೀವನಕ್ಕೊಂದು ಅಸ್ಮಿತೆ ವಿದ್ಯಾರ್ಥಿಗಳಿಂದ ಸಾಕಷ್ಟು ಕಲಿತಿದ್ದೇನೆ. ಈ ಪ್ರಶಸ್ತಿಯನ್ನು ನನ್ನ ವಿದ್ಯಾರ್ಥಿಗಳಿಗೆ ಅರ್ಪಿಸುತ್ತೇನೆ ಎಂದು ಭಾವುಕರಾದರು.

ಈ ಸಂದರ್ಭದಲ್ಲಿ ಊರಿನ ಗಣ್ಯರು, ಶಾಲಾ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಸೇರಿ ಶಿಕ್ಷಕರಿಗೆ ಹೃದಯ ತುಂಬಿ ಸನ್ಮಾನವನ್ನು ಮಾಡಿ ಹರ್ಷ ವ್ಯಕ್ತಪಡಿಸಿದರು.

ಇದೆ ಸಂಧರ್ಭದಲ್ಲಿ ಮುಖ್ಯ ಶಿಕ್ಷಕ ವೆಂಕಟೇಶ್, ಎಸ್ ಡಿ ಎಂ ಡಿ ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಯಾದು ನಾಯ್ಕ, ನಿವೃತ್ತ ಪ್ರಾಧ್ಯಾಪಕ ಕೆ. ಸಿ.ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ ಬಸವರಾಜ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅರುಣ್ ಕುಮಾರ್, ಮಾಜಿ ಗ್ರಾಂ. ಪಂ ಅಧ್ಯಕ್ಷ ಜಯಣ್ಣ, ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗನಾಥ್ , ಶಿಕ್ಷಕರಾದ ಪರಮೇಶ್ವರಪ್ಪ,ವೀರಭದ್ರಪ್ಪ, ಜಗದೀಶ್,ನಾಗರಾಜ್, ಬಿ ಆರ್ ಪಿ ಜಗದೀಶ್,  ಸಿ ಆರ್ ಪಿ. ಲಿಂಗರಾಜ್, ಅತಿಥಿ ಶಿಕ್ಷಕರಾದ ಮಹಾಂತೇಶ್,ರಂಜಿತಾ, ಸುರೇಶ್, ಆಫ್ರಿದ್ ಖಾನ್,ಗ್ರಾಮದ ಹಿರಿಯರಾದ ತುಕ್ಯಾ ನಾಯ್ಕ, ವೆಂಕ ನಾಯ್ಕ, ಆಟೋ ರಮೇಶ್, ಮಲ್ಲೂರಹಳ್ಳಿ ಕಲಾವಿದ ಡಿ ರಾಜಣ್ಣ, ಹಳೆಯ ವಿದ್ಯಾರ್ಥಿಗಳಾದ , ಲಾಲೂ ಪ್ರಸಾದ್, ಮಹಾಂತೇಶ್ ನಾಯ್ಕ, ಎಲ್.ಎಂ.ತಿಪ್ಪೇಸ್ವಾಮಿ, ಆರ್ ತಿಪ್ಪೇಸ್ವಾಮಿ,ಸಾಗರ್, ಹೇಮಂತ್, ದಯಾನಂದ, ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *