ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ದರ್ಶನ್ ಜೈಲು ವಾಸ ಅನುಭವಿಸಿದರು. ಸುಮಾರು ಐದು ತಿಂಗಳ ಕಾಲ ಜೈಲಿನಲ್ಲಿಯೇ ಇದ್ದರು. ಬಳಿಕ ಅನಾರೋಗ್ಯದ ಕಾರಣದಿಂದ ಮಧ್ಯಂತರ ಜಾಮೀನು ಪಡೆದು ಬಿಜಿಎಸ್ ಆಸ್ಪತ್ರೆಗೆ ದಾಖಲಾದರು. ಇದೋಗ ರೆಗ್ಯುಲರ್ ಬೇಲ್ ಸಿಕ್ಕಿದ್ದು, ಮೈಸೂರಿನ ತೋಟದ ಮನೆಯಲ್ಲಿದ್ದಾರೆ. ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ನಡುವೆ ಪತ್ನಿ ವಿಜಯಲಕ್ಷ್ಮಿ ದೇವಸ್ಥಾನಗಳಿಗೆ ಹರಕೆ ತೀರಿಸುತ್ತಿದ್ದಾರೆ.
ಇಂದು ಚಾಮುಂಡಿ ಬೆಟ್ಟಕ್ಕೆ ತಮ್ಮ ಅತ್ತೆ ಮೀನಾ ತೂಗುದೀಪ ಅವರೊಟ್ಟಿಗೆ ಭೇಟಿ ನೀಡಿ, ತಾಯಿಗೆ ವಿಶೇಷ ಪೂಜೆ ಮಾಡಿಸುವ ಮೂಲಕ ಹರಕೆ ತೀರಿಸಿದ್ದಾರೆ. ದರ್ಶನ್ ಜೈಲಿನಿಂದ ಹೊರಗೆ ಬಂದರೆ, ಬೇಲ್ ಸಿಕ್ಕರೆ ಪೂಜೆ ಸಲ್ಲಿಸುವ ಹರಕೆ ಹೊತ್ತಿದ್ದರು. ಇಂದು ಅದನ್ನು ಪೂರ್ಣಗೊಳಿಸಿದ್ದಾರೆ. ಮೈಸೂರು ಹುಟ್ಟೂರು. ಚಾಮುಂಡೇಶ್ವರಿಗೆ ಯಾವಾಗಲೂ ಹೋಗುತ್ತಾ ಇರುತ್ತಾರೆ. ಹೀಗಾಗಿ ಮೀನಾ ತೂಗುದೀಪ ಅವರು ಕೂಡ ಹರಕೆ ಹೊತ್ತಿದ್ದರು.
ಇನ್ನು ದರ್ಶನ್ ಜೈಲು ಸೇರಿದಾಗಿನಿಂದ ವಿಜಯಲಕ್ಷ್ಮಿ ತಮ್ಮ ಪತಿಗಾಗಿ ಹೋರಾಟ ಮಾಡಿದ್ದಾರೆ. ಕಾನೂನಿನ ಹೋರಾಟದ ಜೊತೆಗೆ ದೇವರುಗಳ ಬಳಿ ಮನವಿ ಮಾಡಿಕೊಂಡಿದ್ದೇ ಹೆಚ್ಚು. ಶಕ್ತಿಪೀಠಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ದರ್ಶನ್ ಪರ ಬೇಡಿಕೆ ಇಡುತ್ತಿದ್ದರು. ವಿಜಯಲಕ್ಷ್ಮಿ ಹೋರಾಟದ ಪ್ರತಿಫಲವೇ ಇಂದು ದರ್ಶನ್ ಜಾಮೀನು ಮೂಲಕ ಹೊರಗೆ ಬಂದಿದ್ದಾರೆ.
ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್, ಸರ್ಜರಿ ಮಾಡಿಸಿಕೊಳ್ಳಬೇಕೆಂದು ಕೋರ್ಟ್ ಗೆ ವರದಿ ಸಲ್ಲಿಕೆ ಮಾಡಿದ್ದರು. ಆದರೆ ಈಗ ಸರ್ಜರಿ ಮಾಡಿಸಿಕೊಳ್ಳದೆ ತೋಟದ ಮನೆಗೆ ತೆರಳಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.