ಬಾಂಗ್ಲಾದೇಶದಲ್ಲಿ ಭೀಕರ ಅಗ್ನಿ ದುರಂತ | 43 ಮಂದಿ ಸಜೀವ ದಹನ

 

ಸುದ್ದಿಒನ್: ಬಾಂಗ್ಲಾದೇಶದಲ್ಲಿ ಗುರುವಾರ ಮಧ್ಯರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ರಾಜಧಾನಿ ಢಾಕಾದ ಮಾಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದವರು ಅಪಘಾತದಿಂದ 75 ಜನರನ್ನು ರಕ್ಷಿಸಿದ್ದಾರೆ.

ಗುರುವಾರ ಮಧ್ಯರಾತ್ರಿ ಢಾಕಾ ನಗರದ ಏಳು ಅಂತಸ್ತಿನ ಕಟ್ಟಡದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಬಾಂಗ್ಲಾದೇಶದ ಆರೋಗ್ಯ ಸಚಿವ ಸಮಂತಾ ಲಾಲ್ ಸೇನ್ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಮಾಲ್‌ನಿಂದ ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಕನಿಷ್ಠ 43 ಜನರು ಪ್ರಾಣ ಕಳೆದುಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿರುವ 22 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಸತ್ತವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು ಎನ್ನಲಾಗಿದೆ. ಢಾಕಾದ ಹೃದಯಭಾಗದಲ್ಲಿರುವ ಜನಪ್ರಿಯ ಮಾಲ್‌ನ ಮೊದಲ ಮಹಡಿಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಬಾಂಗ್ಲಾದೇಶ ಅಗ್ನಿಶಾಮಕ ಸೇವೆ ಮತ್ತು ಸಿವಿಲ್ ಡಿಫೆನ್ಸ್ ಅಪಘಾತದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಬೆಂಕಿಯಿಂದ ಪಾರಾಗಲು ಜನರು ಭಯಭೀತರಾಗಿ ಕಿರುಚಿಕೊಂಡು ಓಡುತ್ತಿರುವುದು ದೃಶ್ಯದಲ್ಲಿ ಕಂಡು ಬರುತ್ತಿದೆ. ಆದರೆ, ಘಟನೆಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮಾಲ್ ನಲ್ಲಿ ಕೆಲಸ ಮಾಡುವ ಮಹಮ್ಮದ್ ಅಲ್ತಾಪ್ ಎಂಬ ಉದ್ಯೋಗಿ ಅಡುಗೆ ಮನೆಯ ಕಿಟಕಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಬೆಂಕಿಯಲ್ಲಿ ಇಬ್ಬರು ಸಹೋದ್ಯೋಗಿಗಳು ಸುಟ್ಟು ಕರಕಲಾಗಿದ್ದಾರೆ.

13 ಅಗ್ನಿಶಾಮಕ ವಾಹನಗಳು ಎರಡು ಗಂಟೆಗಳ ಬಿರುಸಿನ ಪ್ರಯತ್ನದ ನಂತರ ಬೆಂಕಿಯನ್ನು ಹತೋಟಿಗೆ ತಂದಿದೆ ಎಂದು ಅಗ್ನಿಶಾಮಕ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ 75 ಜನರಲ್ಲಿ 42 ಜನರು ಪ್ರಸ್ತುತ ಪ್ರಜ್ಞಾಹೀನರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *