ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 25 : ಹರಿಹರದಲ್ಲಿ ನವೆಂಬರ್ 23 ಮತ್ತು 24 ರಂದು ನಡೆದ ಅಂತರ್ ಜಿಲ್ಲಾ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿ ಟ್ರೋಫಿ ಗೆದ್ದ ಚಿತ್ರದುರ್ಗ ವಕೀಲರ ತಂಡ ವಕೀಲರ ಭವನದಲ್ಲಿ ಸೋಮವಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಿಗೆ ಟ್ರೋಪಿಯನ್ನು ಸಮರ್ಪಿಸಿತು.
ಟ್ರೋಫಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ವಕೀಲರುಗಳಲ್ಲಿ ಕ್ರೀಡಾ ಮನೋಭಾವ ಇಮ್ಮಡಿಯಾಗಬೇಕು. ಹರಿಹರದಲ್ಲಿ ನಡೆದ ಟೆನ್ನಿಸ್‍ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ನಮ್ಮ ವಕೀಲರು ಟ್ರೋಫಿ ಗೆದ್ದಿರುವುದು ಅತ್ಯಂತ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ಅಂತರ್ ಜಿಲ್ಲಾ ಕ್ರಿಕೆಟ್ ಟೂರ್ನಿ ನಡೆಸುವ ಚಿಂತನೆಯಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕೆಂದು ವಕೀಲರುಗಳಲ್ಲಿ ವಿನಂತಿಸಿದರು.
ಹಿರಿಯ ನ್ಯಾಯವಾದಿ ಎಚ್.ಎಂ.ಎಸ್.ನಾಯಕ ಮಾತನಾಡುತ್ತ ನಮ್ಮ ವಕೀಲರು ಟ್ರೋಫಿ ತರುವ ಮೂಲಕ ವಕೀಲರ ಸಂಘಕ್ಕೆ ಗೌರವ ತಂದುಕೊಟ್ಟಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಚಾಣಾಕ್ಷತನ ಮುಖ್ಯ. ಸೋಲಿನಿಂದ ಗೆಲ್ಲಬೇಕೆಂಬ ಸ್ಪೂರ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.
ನ್ಯಾಯವಾದಿ ರಿಜ್ವಾನ್ ಮಾತನಾಡಿ ವಕೀಲರ ಸಂಘ ಹರಿಹರದಲ್ಲಿ ನಡೆದ ಟೂರ್ನಿಯಲ್ಲಿ ಟ್ರೋಫಿ ಗೆದ್ದಿರುವುದು ಸಂತಸವಾಗಿದೆ. ಚಿತ್ರದುರ್ಗದಲ್ಲಿ ಅಂತರ್ ಜಿಲ್ಲಾ ಟೂರ್ನಮೆಂಟ್ ನಡೆಸಿ ಎಂದು ವಕೀಲರ ಸಂಘಕ್ಕೆ ಸಲಹೆ ನೀಡಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ವಿಜಯಕುಮಾರ್ ಮಾತನಾಡುತ್ತ ಟ್ರೋಫಿಗೆ ಅತ್ಯಂತ ಮೌಲ್ಯವಿದೆ. 2001 ರಿಂದ ಪ್ರಯತ್ನ ಮಾಡುತ್ತಿದ್ದೆವು. ಆಗಿರಲಿಲ್ಲ.
ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ತುಮಕೂರು ಜಿಲ್ಲೆಗಳ ಅಂತರ್ ಜಿಲ್ಲಾ ಕ್ರಿಕೆಟ್ ಟೂರ್ನಿಯನ್ನು ಚಿತ್ರದುರ್ಗದಲ್ಲಿ ನಡೆಸೋಣ. ಪ್ರತಿನಿತ್ಯ ಅಭ್ಯಾಸದೊಂದಿಗೆ ಸತತ ಪ್ರಯತ್ನದಿಂದ ಮಾತ್ರ ಗೆಲುವು ಸಾಧಿಸಬಹುದೆಂದು ಹೇಳಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್ ಮಾತನಾಡಿ ಗೆಲುವಿಗಿಂತ ಪಂದ್ಯದಲ್ಲಿ ಭಾಗವಹಿಸುವಿಕೆ ಮುಖ್ಯ. ನಮ್ಮ ವಕೀಲರ ಸಂಘದಿಂದಲೂ ಮುಂದಿನ ದಿನಗಳಲ್ಲಿ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯ ನಡೆಯಲಿ ಎಂದು ಆಶಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‍ಕುಮಾರ್, ವಕೀಲರುಗಳಾದ ಹನುಮಂತಪ್ಪ, ಮೂರ್ತಿ, ಲೋಕೇಶ್, ಪಿ.ಆರ್.ವೀರೇಶ್, ಅಶೋಕ್, ಶಿವಕುಮಾರ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.