ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್.17 : ಗಡಿಭಾಗದಲ್ಲಿ ಕನ್ನಡ ಭಾಷಾ ಜಾಗೃತಿಗೆ ಪ್ರತಿಯೊಬ್ಬ ಕನ್ನಡಿಗರ ಜಾಗೃತಿ ಅಗತ್ಯ ಇದೆ ಎಂದು ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ಗಡಿಭಾಗದಲ್ಲಿ ವೇದಿಕೆ ಸಂಘಟನೆಯೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪರಶುರಾಂಪುರ-ಕೊರ್ಲಕುಂಟೆ ರಸ್ತೆ ಮಾರ್ಗದಲ್ಲಿ ತೆಲುಗು ಭಾಷೆಯಲ್ಲಿ ಅಳವಡಿಸಿದ್ದ ನಾಮಫಲಕಗಳಿಗೆ ಮಸಿ ಬಳಿಯುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಡಿಭಾಗದಲ್ಲಿ ತೆಲುಗು ಭಾಷೆಯ ನಾಮಫಲಕಗಳು : ಕನ್ನಡ ಭಾಷಾ ಜಾಗೃತಿ ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ : ಕೊರ್ಲಕುಂಟೆ ತಿಪ್ಪೇಸ್ವಾಮಿ pic.twitter.com/0pO8y6FhiG
— suddione-kannada News (@suddione) October 17, 2023
ಗಡಿಭಾಗದಲ್ಲಿ ತೆಲುಗು ಭಾಷೆಯ ನಾಮಫಲಕಗಳು ಕಂಡು ಬಂದಲ್ಲಿ ತಾಲೂಕು ಆಡಳಿತ ಮತ್ತು ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗುತ್ತಿದೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೋಟೀಸ್ ಜಾರಿ ಮಾಡಬೇಕು ಎಂದ ಅವರು, ವಾಣಿಜ್ಯ ವ್ಯಾಪಾರಸ್ಥರು ತೆಲುಗು ನಾಮಫಲಕಗಳು ಅಳವಡಿಸುವುದು ಕಂಡು ಬಂದಲ್ಲಿ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ತೆಲುಗು ಭಾಷೆ ಬಳಸುವ ಮಾಲೀಕರಿಗೆ ನೋಟೀಸ್ ಜಾರಿ ಮಾಡುವ ಮೂಲಕ ಅಂಗಡಿ ಪರವಾನಗಿ ರದ್ದುಪಡಿಸಬೇಕು. ಗಡಿಭಾಗದಲ್ಲಿ ಭಾಷೆಯ ರಕ್ಷಣೆ ಮಾಡಿಕೊಳ್ಳುವುದು ಯಾವುದೋ ಒಂದು ಕನ್ನಡ ಸಂಘಟನೆ ಮತ್ತು ಸಂಸ್ಥೆಯವರ ಜವಾಬ್ದಾರಿ ಎನ್ನುವ ನಿರ್ಲಕ್ಷ್ಯ ದೂರವಾಗಬೇಕು. ಇಲ್ಲಿನ ನೆಲ, ಗಾಳಿ, ಬೆಳಕು ಬೆಳಸಿಕೊಂಡು ವ್ಯವಹಾರ ಆರಂಭಿಸುವ ಪ್ರತಿಯೊಬ್ಬರಿಗೂ ಈ ನೆಲದ ಸಂಸ್ಕೃತಿ ಮತ್ತು ಭಾಷೆಯ ಗೌರವ ಇರಬೇಕು ಎಂದು ಹೇಳಿದರು.
ತೆಲುಗು ಭಾಷೆಯಲ್ಲಿ ನಾಮಫಲಕ ಬರೆಸಿದ್ದ ವ್ಯಾಪಾರ ಮಾಲೀಕ ನಾಗೇಶ್ ಮಾತನಾಡಿ, ಗಡಿಭಾಗದಲ್ಲಿ ಭಾಷಾ ರಕ್ಷಣೆಗೆ ಪ್ರತಿಯೊಬ್ಬರೂ ಎಚ್ಚರವಾಗಿರಬೇಕಾಗಿದೆ. ಕಣ್ತಪ್ಪಿನಿಂದ ತೆಲುಗು ಭಾಷೆಯ ನಾಮಫಲಕ ಸ್ಥಾಪನೆ ಮಾಡಲಾಗಿದೆ. ಸ್ವತಃ ನನ್ನ ಕೈಯಾರೆ ಕಪ್ಪು ಮಸಿ ಬಳಿಯುವ ಮೂಲಕ ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ನಾಮಫಲಕಕ್ಕೆ ಕಪ್ಪು ಮಸಿ ಬಳಿಯಲಾಯಿತು.
ಸ್ಥಳೀಯರಾದ ಗ್ರಾಪಂ ಮಾಜಿ ಸದಸ್ಯ ಡಿ. ಸಿರಿಯಣ್ಣ, ಕೆ.ವಿ. ಪ್ರಸನ್ನ, ಮೀಸೆ ಮಹಾಲಿಂಗಪ್ಪ, ಹೊರಕೆರೆ ರಂಗಸ್ವಾಮಿ, ಪಿ. ರಾಮದಾಸ, ಮಂಜುನಾಥ, ರಾಜಣ್ಣ ಮತ್ತಿತರರು ಇದ್ದರು.