ವಾರಂಗಲ್(ತೆಲಂಗಾಣ): ಚಾಕೊಲೇಟ್ ಗಂಟಲಿಗೆ ಸಿಲುಕಿ ಎಂಟು ವರ್ಷದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಶನಿವಾರ ಪಿನ್ನಾವರಿಯಲ್ಲಿ ನಡೆದಿದೆ.
ಸಂದೀಪ್ ಎಂಬಾತ ಖಾಸಗಿ ಶಾಲೆಯೊಂದರಲ್ಲಿ 3ನೇ ತರಗತಿ ಓದುತ್ತಿದ್ದ. ತರಗತಿಯ ಬೆಂಚಿನ ಮೇಲೆ ಕುಳಿತ ಕೂಡಲೇ ಪ್ರಜ್ಞೆ ತಪ್ಪಿದ್ದಾನೆ. ಶಾಲೆಯ ಪ್ರಾಂಶುಪಾಲರು ಬಾಲಕನ ತಂದೆ ಕಂಗಹನ್ ಸಿಂಗ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ತಕ್ಷಣವೇ ಶಾಲೆಯ ಸಿಬ್ಬಂದಿ ಬಾಲಕನನ್ನು ಎಂಜಿಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ವೈದ್ಯರು ಗಂಟಲಿನಲ್ಲಿ ಚಾಕೊಲೇಟ್ ಸಿಕ್ಕಿಹಾಕಿಕೊಂಡಿರುವುದನ್ನು ಪತ್ತೆ ಮಾಡಿದರು. ಶಸ್ತ್ರ ಚಿಕಿತ್ಸೆ ಮಾಡಿ ಅಡೆತಡೆ ನಿವಾರಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ.
ಇತ್ತೀಚೆಗಷ್ಟೇ ವಿದೇಶಿ ಪ್ರವಾಸದಿಂದ ಹಿಂದಿರುಗಿದ ಉದ್ಯಮಿ ಕಂಗಹನ್ ಸಿಂಗ್ ಅವರು ತಮ್ಮ ಮಕ್ಕಳಿಗೆ ವಿದೇಶದಿಂದ ಚಾಕೊಲೇಟ್ಗಳನ್ನು ತಂದಿದ್ದರು. ಅವರ ಪತ್ನಿ ಗೀತಾ ತನ್ನ ಮೂವರು ಮಕ್ಕಳನ್ನು ಅವರ ತಂದೆ ಶಾಲೆಗೆ ಕರೆದೊಯ್ಯುವ ಮೊದಲು ಕೆಲವು ಚಾಕೊಲೇಟ್ಗಳನ್ನು ನೀಡಿದ್ದರು ಎಂದು ತಿಳಿದು ಬಂದಿದೆ.