ಸುದ್ದಿಒನ್, ಚಿತ್ರದುರ್ಗ, ಜುಲೈ. 30 : ಕಳೆದ ಶುಕ್ರವಾರ ಮಳೆಯಿಂದಾಗಿ ಕುಸಿದು ಬಿದ್ದದ್ದ ಜಯಪ್ಪ ಅವರ ಮನೆಗೆ ಇಂದು (ಮಂಗಳವಾರ) ತಹಶೀಲ್ದಾರ್ ನಾಗವೇಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಂತರ ಮಾತನಾಡಿದ ಅವರು, ಮನೆ ಬಿದ್ದು ಹಾನಿಗೊಳಗಾದ ಜಯಪ್ಪನವರಿಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ಆದಷ್ಟು ಬೇಗ ಕುಡಿಸಲು ಪ್ರಯತ್ನಿಸುತ್ತಿದ್ದೇವೆ. ಸದ್ಯಕ್ಕೆ ಅವರಿಗೆ ವಾಸ ಮಾಡಲು ಶಾಲಾ ಕೊಠಡಿಯನ್ನು ನೀಡಿದ್ದೇವೆ. ಮತ್ತು ಅವರಿಗೆ ಶಾಲೆಯಲ್ಲಿ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿ ಊಟವನ್ನು ನೀಡುವಂತೆ ತಿಳಿಸಿದ್ದೇವೆ. ಅವರು ತುಂಬಾ ಬುಡವರಾಗಿದ್ದು ಜೀವನಕ್ಕೆ ಮೇಕೆ ಸಾಕಾಣೆ ಮಾಡುತ್ತಿದ್ದರು. ದುರದೃಷ್ಟವಶಾತ್ ಮಳೆಯಿಂದ ಸಾಕಿರುವ 7 ಮೇಕೆಗಳು ಮೃತಪಟ್ಟಿವೆ. ಆದಷ್ಟು ಬೇಗ ಮನೆಯ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಬಿಸಿ ಊಟದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಆಸ್ಪತ್ರೆಗೆ ಭೇಟಿ ನೀಡಿ ಜನವರಿಯಿಂದ ಡೆಂಗಿ ಜ್ವರ ಜಾಸ್ತಿಯಾಗಿದ್ದು ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವಂತೆ ವೈದ್ಯರಿಗೆ ತಿಳಿಸಿದರು. ಔಷಧಿ ದಾಸ್ತಾನು ಓ ಪಿ ಡಿ ಪರಿಶೀಲಿಸಿದರು. ಹಾಗೆಯೇ ಇದೇ ಸಂದರ್ಭದಲ್ಲಿ ಆರೋಗ್ಯ ತಪಾಸಣೆಗೆ ಬಂದಿದ್ದ ಸಾರ್ವಜನಿಕರನ್ನು ಮಾತನಾಡಿಸಿ ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಾರಾ ಎಂದು ಗ್ರಾಮಸ್ಥರನ್ನು ವಿಚಾರಿಸಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ವತ್ಸಲ, ಗ್ರಾಮ ಆಡಳಿತ ಅಧಿಕಾರಿ ಸದಾನಂದ ಹಾಗೂ ಸಾರ್ವಜನಿಕರು ಇದ್ದರು.