ಸುದ್ದಿಒನ್, ಚಿತ್ರದುರ್ಗ, (ಜೂ.12) : ವಸತಿ ಶಾಲೆಯಲ್ಲಿ ಮಕ್ಕಳಿಗೆ ತಮ್ಮ ಸ್ವಂತ ಮನೆಯಲ್ಲಿ ಇರುವ ಅನುಭವ ಬರುವಂತಹ ರೀತಿಯಲ್ಲಿ ಸಿಬ್ಬಂದಿಯವರು ಅವರೂಂದಿಗೆ ವರ್ತಿಸಬೇಕು. ಅವರಿಗೆ ಮನೆಯ ಯೋಚನೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಚಿತ್ರದುರ್ಗ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀ ಮತಿ ಡಾ. ನಾಗವೇಣಿ ಹೇಳಿದರು.
ಅವರು ತಾಲ್ಲೂಕಿನ ಬೊಮ್ಮೇನಹಳ್ಳಿ ಸಮೀಪದ ಕಡ್ಲೆಗುದ್ದುವಿನಲ್ಲಿ ನೂತವಾಗಿ ಪ್ರಾರಂಭವಾಗಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಅಡುಗೆ ಕೋಣೆಗೂ ತೆರಳಿ ದಾಸ್ತಾನು ಮತ್ತು ತರಕಾರಿಗಳನ್ನು ಪರಿಶೀಲಿಸಿ ಅಲ್ಲಿಯೇ ಊಟವನ್ನು ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ತಾವು ಈ ಹಿಂದೆ ಕೆಲಸ ನಿರ್ವಹಿಸಿದ ತಾಲ್ಲೂಕಿನ ವಸತಿ ಶಾಲೆಗಳಲ್ಲಿ ಆದ ಸಮಸ್ಯೆಗಳನ್ನು ವಿವರಿಸುತ್ತಾ ಎಲ್ಲರೂ ಜಾಗರೂಕತೆಯಿಂದ ಕೆಲಸ ನಿರ್ವಹಿಸಿ ಎಂದು ಸಲಹೆ ನೀಡಿದರು.
ಇದೀಗ ಆರನೇ ತರಗತಿಗೆ ಸೇರಿ ಬರುವ ಮಕ್ಕಳ ಬಗ್ಗೆ ಅತೀವ ಕಾಳಜಿ ವಹಿಸಬೇಕು. ಮತ್ತು ಉತ್ತಮ ಶಿಕ್ಷಣವನ್ನು ನೀಡಬೇಕೆಂದು ಸಲಹೆ ಸೂಚನೆಗಳನ್ನು ನೀಡಿದರು. ವಿದ್ಯಾರ್ಥಿಗಳೂಂದಿಗೆ ಸಮಲೋಚನೆ ನಡೆಸಿ ವಿದ್ಯಾಭ್ಯಾಸದ ಹೆಚ್ಚಿನ ಗಮನ ಹರಿಸುವಂತೆ ಕಿವಿ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ವಸತಿ ಶಾಲಾ ಪ್ರಾಂಶುಪಾಲರಾದ ರಮೇಶ್ ಆರ್. ನಿಲಯಪಾಲಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.