Teachers, work hard, increase, quality of education, results, DC Kavitha S. Mannikeri, featured, suddione, chitradurga, ಶಿಕ್ಷಣ, ಗುಣಮಟ್ಟ , ಫಲಿತಾಂಶ, ಹೆಚ್ಚಳ, ಶಿಕ್ಷಕರು, ಶ್ರಮಿಸಬೇಕು, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಸುದ್ದಿಒನ್, ಚಿತ್ರದುರ್ಗ,
Teachers should work hard to increase the quality of education and results: District Collector Kavitha S. Mannikeri
ಶಿಕ್ಷಣದ ಗುಣಮಟ್ಟ ಹಾಗೂ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಬೇಕು : ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
ಚಿತ್ರದುರ್ಗ,(ಜುಲೈ 27) : ಪರಿಣಾಮಕಾರಿ ಬೋಧನೆಯ ಮೂಲಕ ಶಿಕ್ಷಣದ ಗುಣಮಟ್ಟ ಹಾಗೂ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರೋಟರಿ, ಫೋರ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ತಂತ್ರಜ್ಞಾನದ ಮೂಲಕ ಗಣಿತ ಬೋಧನೆಯ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸುವ ರೀತಿಯಲ್ಲಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಮುಂದಿನ ವರ್ಷದ ವೇಳೆಗೆ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನವನ್ನು ಗಳಿಸಬೇಕು ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಕೆ. ರವಿಶಂಕರ್ ರೆಡ್ಡಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರವರು ಶಿಕ್ಷಣ ಪಡೆದು ದೇಶಕ್ಕೆ ಮಾದರಿಯಾದಂತಹ ಸಂವಿಧಾನವನ್ನು ರೂಪಿಸಿದ್ದಾರೆ. ಶಿಕ್ಷಣ ಇದ್ದರೆ ದೇಶವು ಅಭಿವೃದ್ಧಿ ಹೊಂದುತ್ತದೆ. ಪ್ರತಿ ದಿನವೂ ಕೂಡ ಶಿಕ್ಷಣದಲ್ಲಿ ಹೊಸ ಹೊಸ ರೀತಿಯಲ್ಲಿ ಕಲಿಕೆಯನ್ನು ಮಾಡುತ್ತಲೇ ಇರುತ್ತೇವೆ. ಕೋವಿಡ್ ಸಂದರ್ಭದಲ್ಲಿ ಶಿಕ್ಷಕರು ಪ್ರಾಣವನ್ನು ಲೆಕ್ಕಿಸದೆ ನಿರಂತರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳುವುದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದರು.
ಗಣಿತ ಸಂಪನ್ಮೂಲ ವ್ಯಕ್ತಿ ಬಸವರಾಜ್ ಉಮ್ರಾಣಿ ಮಾತನಾಡಿ ಗಣಿತ ಕಲಿಕೆಯಲ್ಲಿ ಏಕಾಗ್ರತೆ ತುಂಬಾ ಮುಖ್ಯ. ಯೋಗ, ಧ್ಯಾನ, ಪ್ರಾಣಾಯಾಮ ಮಾಡುವುದರ ಮೂಲಕ ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು. ಗಣಿತ ವಿಷಯ ಕಬ್ಬಿಣದ ಕಡೆಲೆಯಲ್ಲ. ಗಣಿತ ಅನ್ವಯಿಕ ವಿಷಯವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಬಳಕೆಯಾಗುತ್ತದೆ. ಉತ್ತಮ ಗಣಿತ ಜ್ಞಾನ ನಮ್ಮನ್ನು ಕ್ರೀಯಾಶೀಲವಾಗಿ ಯೋಚಿಸಲು ಪ್ರೇರೆಪಿಸುತ್ತದೆ. ಶಾಲಾ ಮಕ್ಕಳು ಟಿವಿ ಹಾಗೂ ಮೊಬೈಲ್ನ್ನು ಅವಶ್ಯಕತೆಗೆ ತಕ್ಕಂತೆ ಬಳಕೆ ಮಾಡಬೇಕು. ಗಣಿತ ಶಿಕ್ಷಕರು ಮಕ್ಕಳಿಗೆ ಯಾವ ರೀತಿಯಲ್ಲಿ ಗಣಿತ ಪರಿಕಲ್ಪನೆಗಳನ್ನು ಅರ್ಥೈಸಬಹುದು ಎಂಬುದನ್ನು ತಿಳಿದು ಬೋಧಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಮಕ್ಕಳಿಗೆ 450 ಪುಸ್ತಕಗಳನ್ನು ರಾಘವೇಂದ್ರ ಕಂಪ್ಯೂಟರ್ ವತಿಯಿಂದ ಉಚಿತವಾಗಿ ವಿತರಣೆ ಮಾಡಲಾಯಿತು.
ಡಯಟ್ ಉಪ ನಿರ್ದೇಶಕ ಎಸ್.ಕೆ.ಬಿ ಪ್ರಸಾದ್, ಪ್ರಾಂಶುಪಾಲರು ಮತ್ತು ಪದನಿಮಿತ್ತ ಸಹ ನಿರ್ದೇಶಕ ಎಚ್.ಮಂಜುನಾಥ್, ಹಿರಿಯೂರು ಬಿ.ಇ.ಒ ನಾಗಭೂಷಣ್, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಶ್ರೀನಿವಾಸ್, ವಿದ್ಯಾಧಿಕಾರಿಗಳಾದ ಎನ್.ಆರ್ ತಿಪ್ಪೇಸ್ವಾಮಿ, ವಿ.ತಿಪ್ಪೇಸ್ವಾಮಿ, ಚಿತ್ರದುರ್ಗ ಜಿಲ್ಲಾ ಗಣಿತ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಜಯಣ್ಣ, ರೋಟರಿ ಕ್ಲಬ್ ಅಧ್ಯಕ್ಷ ಡಾ. ಮಧುಸೂಧನ್ ರೆಡ್ಡಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷ ವರಲಕ್ಷ್ಮಿ ರತ್ನಾಕರ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪರೀಕ್ಷಕರು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.