ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 28 : ಬಹುಭಾಷಾ ಪಾಂಡಿತ್ಯ, ಪ್ರಭುತ್ವ ಸಾಧನೆಯ ಉತ್ತುಂಗಕ್ಕೇರಲು ಸಾಧನ. ವಿಶ್ವದ ಪ್ರತಿಯೊಂದು ಭಾಷೆಯಲ್ಲಿಯೂ ಜ್ಞಾನದ, ಬದುಕಿನ ಅಗಾಧ ಕಣಜ ತುಂಬಿದೆ ಎಂದು ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.
ನಗರದ ರೋಟರಿ ಶಾಲೆ ವತಿಯಿಂದ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ಒಂದು ತಿಂಗಳ ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರ ಮುಕ್ತಾಯ ಸಮಾರಂಭದಲ್ಲಿ ರೋಟರಿ ಟ್ರಸ್ಟ್ ನ ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ ಅವರು, ಶಿಕ್ಷಕರು ವಿದ್ಯಾರ್ಥಿಗಳನ್ನು ಜ್ಞಾನಿಗಳು ಹಾಗೂ ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ಮಾಡುವ ಗುರುತರ ಜವಾಬ್ದಾರಿ ಹೊಂದಿದ್ದಾರೆ.
ಆದ್ದರಿಂದ ನಮ್ಮ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ನಿರಂತರ ಕಲಿಕೆ ಯಶಸ್ಸಿನ ಗುಟ್ಟು ಮತ್ತು ಅಭಿನಂದನಾರ್ಹವಾದುದು ಎಂದು ತಿಳಿಸಿದರು.
ರೋಟರಿ ಶಾಲೆಯು ಹಲವು ವರ್ಷಗಳಿಂದ ನಗರದ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿ ಎಂದು ಆಶಿಸಿದರು.
ರೋಟರಿ ಶಾಲಾ ಟ್ರಸ್ಟ್ ನ ಕಾರ್ಯದರ್ಶಿ ರೊ. ಪಿ.ಹೆಚ್.ಎಫ್, ಪಿ.ಡಿ.ಜಿ ಮಧುಪ್ರಸಾದ್ ಕೆ ಮಾತನಾಡಿ, ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ ವತಿಯಿಂದ ಒಂದು ತಿಂಗಳ ಕಾರ್ಯಾಗಾರ ಯಶಸ್ವಿಯಾಗಿದೆ. ನಮ್ಮ ಶಾಲೆಯ ಶಿಕ್ಷಕರು ಉತ್ತಮ ರೀತಿಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಇದರಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗಬೇಕಾಗಿದೆ. ಆಗ ಮಾತ್ರ ಶಿಕ್ಷಕರ ಹಾಗೂ ಆಡಳಿತ ಮಂಡಳಿಯ ಶ್ರಮ ಫಲ ನೀಡಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಟ್ರಸ್ಟ್ ನ ಸದಸ್ಯರಾದ ರೊ. ಚಂದ್ರಮೋಹನ್ ಕೆ.ಎಸ್, ರೋಟರಿ ಕ್ಲಬ್ ಅಧ್ಯಕ್ಷರಾದ ವೀರಣ್ಣ ಜಿ.ಎನ್, ಕಾರ್ಯದರ್ಶಿ ಶಿವಣ್ಣ ಕುರುಬರಳ್ಳಿ, ಶಾಲಾ ಮುಖ್ಯ ಶಿಕ್ಷಕಿ ಉಮಾದೇವಿ, ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಝೀನತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಶಾಲೆ ಶಿಕ್ಷಕರಾದ ಜಯಣ್ಣ, ಉಮೇಶ್, ನಿರ್ಮಲ, ಜ್ಯೋತಿ, ಶಾಹಿದ್, ಸೌಮ್ಯ, ಸುಮಾರಾಣಿ, ಝೀನತ್, ಶಮೀಮ್ ಬಾನು, ಮಲ್ಲಿಕಾ, ಜಯಲಕ್ಷ್ಮಿ, ಅನುಷ, ರಜಿಯಾ ಬೇಗಂ ಇನ್ನಿತರರಿದ್ದರು.