ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 25 : ಮಾನಸಿಕ ಹಾಗೂ ದೈಹಿಕವಾಗಿ ಮಕ್ಕಳು ಆರೋಗ್ಯವಂತರಾಗಿರಬೇಕಾದರೆ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ತುಂಬಾ ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ವಾಸವಿ ಶಾಲೆಯಲ್ಲಿ ಬುಧವಾರ ನಡೆದ ತಾಲ್ಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಸಭೆ ಉದ್ಗಾಟಿಸಿ ಮಾತನಾಡಿದರು.
ಶಾಲೆಗಳ ಒಟ್ಟಾರೆ ಬೆಳವಣಿಗೆಯಲ್ಲಿ ಎಲ್ಲರ ಪಾತ್ರ ಪ್ರಮುಖವಾದುದು. ಶಿಕ್ಷಣದ ಜೊತೆ ಮಕ್ಕಳಿಗೆ ಶಿಸ್ತು, ಸಂಸ್ಕಾರ ಕಲಿಸುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ.
ಪ್ರಾಯೋಗಿಕ ಹಾಗೂ ಬೋಧನಾ ರೂಪದಲ್ಲಿ ದೈಹಿಕ ಶಿಕ್ಷಣವನ್ನು ಮಕ್ಕಳಿಗೆ ಕಲಿಸಲು ಇಲಾಖೆ ಅವಕಾಶ ಕೊಟ್ಟಿದೆ. ಜೂ.ನಿಂದ ಹಿಡಿದು ಮಾ.ವರೆಗೆ ಏನೇನು ಕಾರ್ಯಚಟುವಟಿಕೆ ರೂಪಿಸಬೇಕೆನ್ನುವ ವಿವರ ಕ್ಯಾಲೆಂಡರ್‍ನಲ್ಲಿದೆ. ದೈಹಿಕ ಶಿಕ್ಷಣವೆಂದರೆ ನಿರ್ಲಕ್ಷ್ಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಹಾಗೂ ವಸ್ತುನಿಷ್ಟವಾಗಿ ಕೆಲಸ ಮಾಡಬೇಕು. ಮುಖ್ಯ ಶಿಕ್ಷಕರು ದೈಹಿಕ ಶಿಕ್ಷಕರುಗಳ ಚಟುವಟಿಕೆಗಳನ್ನು ತಿಳಿದುಕೊಂಡಿರಬೇಕೆಂದು ಹೇಳಿದರು.
ನಿಗಧಿತ ದಿನಾಂಕ ಮತ್ತು ವೇಳಾಪಟ್ಟಿ ಪ್ರಕಾರ ಕೆಲಸ ಮಾಡಿದರೆ ಬೌದ್ದಿಕ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಸರ್ವಾಂಗೀಣ ಚಟುವಟಿಕೆಗೆ ಎಲ್ಲರೂ ಕೈಜೋಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮನವಿ ಮಾಡಿದರು.
ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಜಯ್‍ಕುಮಾರ್ ಮಾತನಾಡಿ ತರಗತಿಯಲ್ಲಿ ವಾತಾವರಣ ಸ್ವಚ್ಚಂದವಾಗಿರಬೇಕಾದರೆ ಶಿಕ್ಷಕರುಗಳು ಮಕ್ಕಳ ಮನಸ್ಸನ್ನು ಪಾಠದ ಕಡೆಗೆ ಸೆಳೆದು ಸ್ಪೂರ್ತಿಯ ಚಿಲುಮೆಯನ್ನಾಗಿಸಬೇಕು. ಕ್ರೀಡೆಯಲ್ಲಿ ಆಸಕ್ತಿಯಿರುವ ಮಕ್ಕಳನ್ನು ಗುರುತಿಸಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಗಳಲ್ಲಿ ಭಾಗವಹಿಸುವಂತೆ ಪ್ರೊತ್ಸಾಹಿಸುವ ಜವಾಬ್ದಾರಿ ದೈಹಿಕ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ ಮಾತನಾಡಿ 46 ಅಂಶಗಳಿರುವ ಕ್ರೀಡಾ ಚೇತನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ದೈಹಿಕ ಶಿಕ್ಷಣ ಮುಂದೆ ಕಷ್ಟವಾಗಲಿದೆ ಎನ್ನುವುದು ಗೊತ್ತಾಗಲಿ ಎನ್ನುವ ಕಾರಣಕ್ಕಾಗಿ ಕ್ಯಾಲೆಂಡರ್ ಹೊರತರಲಾಗಿದೆ. ಪ್ರತಿ ಶಾಲೆಗಳಲ್ಲಿಯೂ 46 ಅಂಶಗಳನ್ನು ಅನುಷ್ಟಾನಗೊಳಿಸಬೇಕು. ಮಕ್ಕಳಲ್ಲಿ ವಿಶೇಷ ಚೈತನ್ಯ ಮೂಡಿಸುವುದಕ್ಕಾಗಿ ಜಿಲ್ಲೆಯಲ್ಲಿರುವ ಒಂದು ಸಾವಿರ ಶಾಲೆಗಳಿಗೆ ಕ್ಯಾಲೆಂಡರ್ ತಲುಪಬೇಕೆಂದು ಸೂಚಿಸಿದರು.
ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಕಲ್ಲೇಶ್ ಮೌರ್ಯ ಮಾತನಾಡುತ್ತ ವಿಶೇಷ ಶಿಕ್ಷಕರನ್ನು ಉಳಿಸಲು ಹೆಚ್ಚುವರಿ ಶಿಕ್ಷಕರುಗಳನ್ನು ವರ್ಗಾವಣೆ ಮಾಡುವುದು ಸರಿಯಲ್ಲ. 2008 ರಲ್ಲಿ ಪಠ್ಯ ಪುಸ್ತಕ ಕೊಟ್ಟರು ದೈಹಿಕ ಶಿಕ್ಷಕರುಗಳ ನೇಮಕಾತಿಯಾಗಿಲ್ಲ. ದೈಹಿಕ ಶಿಕ್ಷಕರುಗಳಿಗೆ ನಾನಾ ರೀತಿಯ ಸಮಸ್ಯೆಗಳಿವೆ ಸರ್ಕಾರ ಗಮನ ಹರಿಸಬೇಕಿದೆ ಎಂದು ವಿನಂತಿಸಿದರು.ಟಿ.ಪಿ.ಇ.ಓ. ಬಿ.ಎಂ.ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಸವಿ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ಅಶೋಕ್, ವ್ಯವಸ್ಥಾಪಕ ಗೋಪಾಲಕೃಷ್ಣ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಲತ ಇವರುಗಳು ವೇದಿಕೆಯಲ್ಲಿದ್ದರು.


