ಚಿತ್ರದುರ್ಗ, (ಫೆ.06) : ನಗರದ ಪಿಳ್ಳೇಕೆರೆನಹಳ್ಳಿಯಲ್ಲಿ ವಾಸವಾಗಿದ್ದ ಶಿಕ್ಷಕ ರಮೇಶ್(53) ತೀವ್ರ ಹೃದಯಾಘಾತದಿಂದ ಭಾನುವಾರ ರಾತ್ರಿ ಸುಮಾರು 11:45 ಕ್ಕೆ ನಿಧನರಾದರು.
ನಗರದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯ ಆಂಗ್ಲ ಭಾಷೆಯ ಶಿಕ್ಷಕರಾಗಿ ರಮೇಶ್ ಅವರು ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ರಾತ್ರಿ ವೇಳೆಯಲ್ಲಿ ಅವರಿಗೆ ಆರೋಗ್ಯದ ಸಮಸ್ಯೆಯಿಂದಾಗಿ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ತೀವ್ರ ಹೃದಯಾಘಾತವುಂಟಾಗಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಶಾಲೆಯ ಆಡಳಿತ ಮಂಡಳಿಯವರು ತಕ್ಷಣವೇ ಮಾಹಿತಿಯನ್ನು ಕೇರಳದ ಪಾಲಕ್ಕಾಡ್ ನಲ್ಲಿರುವ ಅವರ ಕುಟುಂಬದವರಿಗೆ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ನಗರದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರಿಗೆ ಪತ್ನಿ, ಓರ್ವ ಗಂಡು ಮಗು ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.ಕೇರಳದಿಂದ ಅವರ ಕುಟುಂಬದವರು ಬಂದ ನಂತರ ಮುಂದಿನ ವಿಧಿವಿಧಾನಗಳನ್ನು ಪೂರೈಸಲಾಗುತ್ತದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿ ಶ್ರೀಮತಿ ಸುಜಾತಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಅಮೋಘ್ ಬಿ ಎಲ್, ಆಡಳಿತಾಧಿಕಾರಿಗಳಾದ ಡಾ|| ರವಿ ಟಿ ಎಸ್ ಪ್ರಾಂಶುಪಾಲರಾದ ಪ್ರಭಾಕರ್ ಎಂ ಎಸ್, ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆಗಳ ಭೋದಕ ವರ್ಗದವರು ಸೇರಿದಂತೆ ಆಡಳಿತ ಮಂಡಳಿಯವರು ಶಿಕ್ಷಕ ರಮೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಶಿಕ್ಷಕ ರಮೇಶ್ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಅವರ ಗೌರವಾರ್ಥವಾಗಿ ಇಂದು (ಸೋಮವಾರ) ಎಸ್ ಆರ್ ಎಸ್ ಹೆರಿಟೇಜ್ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.