ತುಮಕೂರು; ಅಂತರಾಷ್ಟ್ರೀಯ ಚಲನಚಿತ್ರೋವಕ್ಕೆ ಚಂದನವನದ ಮಂದಿಯೇ ಬಾರದಿದ್ದಕ್ಕೆ ಆಕ್ರೋಶಗೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ನಟ್ಟು, ಬೋಲ್ಟ್ ಟೈಟ್ ಮಾಡ್ತೇನೆ ಎಂದಿದ್ದರು. ಈ ವಿಚಾರ ಪರ ವಿರೋಧದ ಚರ್ಚೆ ಹುಟ್ಟು ಹಾಕಿರುವಾಗಲೇ, ತರುಣ್ ಸುಧೀರ್ ಸಿನಿಮಾಗೆ ದಂಡ ಬಿದ್ದಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಂದ ರಾಣಾ ಸಿನಿಮಾಗೆ ದಂಡ ವಿಧಿಸಲಾಗಿದೆ.

ನಿರ್ದೇಶಕ ತರುಣ್ ಸುಧೀರ್ ಪ್ರೊಡಕ್ಷನ್ ನಲ್ಲಿ ನಟಿ ರಕ್ಷಿತಾ ತಮ್ಮ ರಾಣಾ ಅವರ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇದು ಕಳೆದ ಐದು ದಿನಗಳಿಂದ ತುಮಕೂರಿನ ನಾಮದ ಚಿಲುಮೆಯಲ್ಲಿ ನಡೆಯುತ್ತಿದೆ. ಅನುಮತಿ ಇಲ್ಲದೆ ಚಿತ್ರೀಕರಣ ಮಾಡುತ್ತಿದ್ದ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರೀಕರಣವನ್ನ ನಿಲ್ಲಿಸಿ, ಕ್ಯಾರಾವಾನ್, ಲೈಟ್, ಕ್ಯಾಮೆರಾ ಲೈಟ್, ಅಡುಗೆ ಸಾಮಾಗ್ರಿ, ಟೆಂಪೋವನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಚಿತ್ರೀಕರಣ ನಿಂತಿದೆ.

ಈ ಸಂಬಂಧ ಮಾತನಾಡಿರುವ ತರುಣ್ ಸುಧೀರ್, ನಾವೂ ಕಾಡಿನಲ್ಲಿ ಶೂಟಿಂಗ್ ಮಾಡಿರೋದಲ್ಲ. ಒಂದು ಬಾರ್ ಅಂಡ್ ರೆಸ್ಟೋರೆಂಟ್ ಸೃಷ್ಟಿಸಿ ಶೂಟಿಂಗ್ ಮಾಡೋದಕ್ಕೆ ಹೊರಟಿದ್ವಿ. ಮಾರ್ಗ ಮಧ್ಯೆ ನಮ್ಮ ಪ್ರೊಡಕ್ಷನ್ ವಾಹನ ನಿಲ್ಲಿಸಿದ್ವಿ. ಊಟಕ್ಕೆಂದು ಪಕ್ಕದಲ್ಲಿಯೇ ಒಂದು ಲೈಟ್ ಹಾಕಲಾಗಿತ್ತು. ಇದನ್ನ ನೋಡಿದ ಯಾರೋ ವ್ಯಕ್ತಿ ಶೂಟಿಂಗ್ ನಡೆಯುತ್ತಿದೆ ಎಂದು ಭಾವಿಸಿ, ದೂರು ನೀಡಿದ್ದಾರೆ. ನಮಗೆ ಅದು ಫಾರೆಸ್ಟ್ ಎಂಟ್ರಿ, ನಾಮಚಿಲುಮೆ ಇರುವ ಜಾಗ ಎಂದು ಗೊತ್ತಿರಲಿಲ್ಲ. ನಮ್ಮ ಸಿನಿಮಾದ ವಸ್ತುಗಳನ್ನ ಸೀಜ್ ಮಾಡಿಲ್ಲ. ದಂಡ ಹಾಕಿದ್ರು ಕಟ್ಟಿದ್ದೀವಿ ಅಷ್ಟೇ ಎಂದು ನಿರ್ದೇಶಕ ತರುಣ್ ಸುಧೀರ್ ತಿಳಿಸಿದ್ದಾರೆ.

