ಬೆಂಗಳೂರು : ಲಾಸ್ಟ್ ಬಸ್, ಆಕ್ಸಿಡೆಂಟ್ ಸಿನಿಮಾಗಳನ್ನು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದ ಗುರುರಾಜ ಕುಲಕರ್ಣಿ ನಿರ್ದೇಶನದತ್ತ ಹೊರಳಿದ್ದಾರೆ. ಮೊದಲ ಬಾರಿ ಚಿತ್ರಕ್ಕೆ ಕಥೆ ಬರೆದು ನಿರ್ದೇಶಕನ ಕ್ಯಾಪ್ ತೊಟ್ಟಿರುವ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಭರವಸೆಯ ಖಳನಟನೆಂದೇ ಗುರುತಿಸಿಕೊಂಡಿರುವ ತಾರಕ್ ಪೊನ್ನಪ್ಪ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ.
ಗುರುರಾಜ ಕುಲಕರ್ಣಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ತೆರೆಗೆ ಬರಲು ಸಜ್ಜಾಗಿರುವ ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಅಮೃತ ಅಪಾರ್ಟ್ ಮೆಂಟ್ಸ್. ಬೆಂಗಳೂರಿನಲ್ಲಿ ಇಬ್ಬರು ಬೇರೆ ಬೇರೆ ಸಂಸ್ಕೃತಿಯ ನಾಯಕ ನಾಯಕಿ ನಡುವೆ ಹುಟ್ಟುವ ಪ್ರೀತಿ ಕಥೆಯನ್ನೊಳಗೊಂಡಿದೆ. ಆ ಸಂಬಂಧದಲ್ಲಿ ಹುಟ್ಟುವ ಭಿನ್ನಾಭಿಪ್ರಾಯಗಳು ಅವರ ಜೀವನದಲ್ಲಿ ಏನೆಲ್ಲ ಘಟಿಸಲು ದಾರಿ ಮಾಡಿಕೊಡುತ್ತೆ ಎನ್ನುವ ಅಂಶಗಳ ಜೊತೆ ಮರ್ಡರ್ ಮಿಸ್ಟ್ರಿ ಕಥೆಯೂ ತಳಕು ಹಾಕಿಕೊಂಡಿರುವ ಸಿನಿಮಾ ಇದು.
ಖಳನಟನಾಗಿ ಖ್ಯಾತಿಗಳಿಸಿರುವ ತಾರಕ್ ಪೊನ್ನಪ್ಪ ಅವರಿಗೆ ನಾಯಕ ನಟನಾಗಿ ಇದು ಮೊದಲ ಸಿನಿಮಾ. ಈ ಹಿಂದೆ ಕಿರುತೆರೆಯಲ್ಲಿ ಪ್ರಸಿದ್ದಿ ಪಡೆದಿದ್ದ ತಾರಕ್ ಕೆಜಿಎಫ್, ಯುವರತ್ನ, ಸಿನಿಮಾಗಳಲ್ಲಿ ನೆಗೆಟಿವ್ ರೋಲ್ ನಲ್ಲಿ ಮಿಂಚಿದ್ದರು. ಈಗ ಮೊದಲ ಬಾರಿಗೆ ಖಡಕ್ ರೋಲ್ ನಿಂದ ಸಾಫ್ಟ್ ರೋಲ್ ನಲ್ಲಿ ನಟಿಸುತ್ತಿದ್ದು ನಾಯಕ ನಟರಾಗಿ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಚಿತ್ರದ ಕಥೆ ಕೇಳಿ ಸಖತ್ ಥ್ರಿಲ್ ಆಗೋದ್ರ ಜೊತೆಗೆ, ನಿರ್ದೇಶಕರು ಪ್ರತಿ ಪಾತ್ರಕ್ಕೂ ಮಾಡಿಕೊಂಡ ತಯಾರಿ ನೋಡಿ ಇಂಪ್ರೆಸ್ ಆಗಿದ್ದಾರಂತೆ. ಚಿತ್ರದ ಕಟೆಂಟ್ ಮೇಲೆ ಅಪಾರ ಭರವಸೆ ಇದೆ ಎನ್ನುವ ತಾರಕ್ ಪೊನ್ನಪ್ಪ ಖಂಡಿತ ಜನ ಸಿನೆಮಾ ಹಾಗು ತನ್ನ ಪಾತ್ರವನ್ನು ಇಷ್ಟಪಟ್ಟೇ ಪಡ್ತಾರೆ ಎನ್ನುತ್ತಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್,ಟೀಸರ್ ಭರವಸೆಯ ಅಲೆಯನ್ನು ಸಿನಿರಸಿಕರಲ್ಲಿ ಹುಟ್ಟುಹಾಕಿರೋದು ಇದಕ್ಕೆ ಸಾಕ್ಷಿ.
ನಾಯಕಿಯಾಗಿ ಊರ್ವಶಿ ಗೋವರ್ಧನ್ ತೆರೆ ಹಂಚಿಕೊಂಡಿದ್ದು ಮಾನಸ ಜೋಶಿ, ಸೀತಾ ಕೋಟೆ, ಬಾಲಾಜಿ ಮನೋಹರ್, ಸಂಪತ್ ಮೈತ್ರೇಯ, ಮಾಲತೇಶ್, ಸಿತಾರಾ, ಜಗದೀಶ್ ಬಾಲಾ, ರಾಜು ನೀನಾಸಂ, ಅರುಣ್ ಮೂರ್ತಿ, ಶಂಕರ್ ಶೆಟ್ಟಿ ರಂಗಸ್ವಾಮಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಅಜಿತ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ ಮತ್ತು ಎಸ್ ಡಿ ಅರವಿಂದ್ ಸಂಗೀತ ನಿರ್ದೇಶನವಿದ್ದು ಜಿ9 ಕಮ್ಯನಿಕೇಶ್ ಮೀಡಿಯಾ ಅಂಡ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರ ಇದೇ 26 ಕ್ಕೆ ಥಿಯೇಟರ್ ಅಂಗಳಕ್ಕೆ ಬರಲಿದೆ.