ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 15 : ಕಲಾಮನಸುಗಳು ಕಳ್ಳುಬಳ್ಳಿಯಂತೆ ಬೆಳೆದು ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳಬೇಕೆಂದು ಜಾನಪದ ಗಾಯಕ ಹಾಗೂ ವೇದ ಚಿತ್ರದ ಜುಂಜಪ್ಪ ಗೀತೆಯ ಗಾಯಕ ಮೋಹನ್ ಕುಮಾರ್ ಹೇಳಿದರು.
ತನುಶ್ರೀ ಪ್ರಕಾಶನಹಾಗು ಸಾಹಿತ್ಯ ಸಾಂಸ್ಕ್ರತಿಕ ಕಲಾ ವೇದಿಕೆ ವತಿಯಿಂದ ಚಿತ್ರದುರ್ಗದಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ದ್ವಿತೀಯ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಮಧ್ಯೆ ಸಾಕಷ್ಟು ಜನ ಸಾಧಕರಿದ್ದಾರೆ. ಅವರ ಪ್ರತಿಭಾವಂತಿಕೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಗದ ಹಿನ್ನಲೆಯಲ್ಲಿ ಅವಕಾಶದಿಂದ ವಂಚಿತರಾಗುತಿದ್ದಾರೆ.ಅಂತಹ ಎಲೆಮರೆ ಕಾಯಿಯಾಗಿ ಬೆಳೆಯುತ್ತಿರುವ ಸಾಹಿತಿಗಳು ಹಾಗು ಕಲಾವಿದರಿಗೆ ಈ ತನುಶ್ರೀ ಪ್ರಕಾಶನವು ವೇದಿಕೆಯಾಗಿ ಹೊರಹೊಮ್ಮಿದೆ.
ಯುವ ಮನಸುಗಳನ್ನು ಸಂಘಟಿಸಿ ಸಾಹಿತ್ಯಾತ್ಮಕವಾಗಿ ಉಜ್ವಲ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ.ನಮ್ಮಂತಹ ಯುವ ಸಮೂಹಗಳಲ್ಲಿ ಅಡಗಿರುವ ಕಲಾ,ಕೌಶಲ್ಯಗಳನ್ನು ಗುರುತಿಸುವ ಕೆಲಸವನ್ನು ತನುಶ್ರೀ ಸಾಹಿತ್ಯ,ಸಾಂಸ್ಕ್ರತಿಕ ಕಲಾ ಸಂಘದ ರಾಜ್ಯಾಧ್ಯಕ್ಷರಾದ ರಾಜು ಅವರು ಮಾಡ್ತಿದ್ದಾರೆ. ಅವರ ಕಾರ್ಯಕ್ಕೆ ನಾವು ಸಹ ಸಾಥ್ ನೀಡ್ತಿದ್ದೇವೆ.ಆಂದ್ರ ಗಡಿಭಾಗದಲ್ಲಿನ ಮೊಳಕಾಲ್ಮೂರು ತಾಲ್ಲೂಕಿನ ಸೂಲೇನಹಳ್ಳಿಯಂತಹ ಪುಟ್ಟ ಗ್ರಾಮದಲ್ಲಿ ಕಲಾ ಸಂಘವನ್ನು ಕಟ್ಟಿದ್ದಾರೆ.
ಈ ವೇದಿಕೆಯು ಗಡಿಭಾಗದಲ್ಲಿ ಕನ್ನಡ ತೇರುಎಳೆಯಲು ಸಹಕಾರಿಯಾಗಿದೆ. ಈ ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಮತ್ತಷ್ಟು ಸಾಧಕರನ್ನು ಗುರುತಿಸಿ,ಕಲಾವಿದರನ್ನು ಉಳಿಸಿ, ಸಂಘಟಿಸುವ ಶಕ್ತಿ ಈ ತನುಶ್ರೀ ಕಲಾ ವೇದಿಕೆಗೆ ಬರಲಿ ಎಂದು ಆಶಿಸಿದರು.ಈ ವೇಳೆ ವೇದಿಕೆಯಲ್ಲಿ ಪದ್ಮಣ್ಣ ಗಿಡ್ಡಪ್ಪನವರ್ ರಚಿಸಿದ ಕಾವ್ಯ ವೃಕ್ಷಾಂಗನೆ,ಕಾವ್ಯಂತರಂಗ ಹಾಗು ಬಸವರಾಜ್ ಕರುವಿನ ಬರೆದ ಕಣ್ಣೊಳಗಿನ ಕವಲುಗಳು ಎಂಬ ಕೃತಿಗಳನ್ನು ಮೋಹನ್ ಬಿಡುಗಡೆ ಮಾಡಿದರು.ಆ ಕೃತಿಗಳ ವಿಮರ್ಶೆ ಸಹ ಮಾಡಲಾಯಿತು
ಸಮಾವೇಶದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅಥಿತಿಗಳಾದ ಮೊರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲರಾದ ಅನುಸೂಯ ಅವರು, ನಮ್ಮ ಮಕ್ಕಳು ಮೊಬೈಲ್ ಘೀಳಿಗೆ ಬಿದ್ದಿದ್ದಾರೆ. ತಂದೆತಾಯಿಯರನ್ನೆ ಮರೆತು ಮೊಬೈಲ್ ಮೇಲೆ ಅವಲಂಬಿತರಾಗಿದ್ದಾರೆ.ಮನೆಯಲ್ಲಿರುವ ಇಬ್ಬರು ಮಕ್ಕಳು ಪೋಷಕರ ಪ್ರೀತಿಯನ್ನೇ ಮರೆಯುತಿದ್ದಾರೆ. ಹುಟ್ಟಿನಿಂದಲೇ ನಾಡು,ನುಡಿ ಹಾಗು ಸಂಸ್ಕ್ರತಿಯ ಬಗ್ಗೆ ಕೇಳುವ ಗುಣವಿಲ್ಲ.ಬದಲಾಗಿ ಮೊಬೈಲ್ ನಲ್ಲಿ ಬರುವ ವಿವಿಧ ಮಾರಕ ಆಟಗಳಿಗೆ ಮಕ್ಕಳು ಬಲಿಯಾಗ್ತಿದ್ದಾರೆ. ಹೀಗಾಗಿ ಮನೆಯಲ್ಲಿನ ಮಕ್ಕಳಿಗೆ ಮೊಬೈಲ್ ಘೀಳು ತಪ್ಪಿಸಿ ಸಾಹಿತ್ಯ,ಸಂಸ್ಕ್ರತಿ ಪರಿಚಯಿಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದರು.
ಸಮಾಜ ಸೇವಕರಾದ ಪುಷ್ಪಚಂದ್ರಶೇಖರ್ ಈ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿದ್ದರು.ರಾಜ್ಯಾಧ್ಯಕ್ಷರಾದ ರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷರಾದ ಚಿದಾನಂದಮೂರ್ತಿಯವರು ಆಶಯ ನುಡಿಗಳನ್ನಾಡಿದರು. ಪುಟಾಣಿ ಸನ್ನಿಧಿ ಭರತನಾಟ್ಯ ಪ್ರದರ್ಶಿಸಿದರು. ನೃತ್ಯಪಟು ಚಿನ್ಮಯ್ ನೃತ್ಯ ಪ್ರದರ್ಶಿಸಿದರು. ಈ ವೇಳೆ ವಿವಿಧ ಸಾಧಕರಿಗೆ ಸಾಹಿತ್ಯಸಿರಿ ಸಾಧಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ವೇದಿಕೆಯ ಸಂಚಾಲರಾದ ತಿರುಮಲ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನೇತ್ರವತಿ ನೆಲ್ಲಿಕಟ್ಟೆ,ಸರಸ್ವತಿ ಮತ್ತಿತರರು ಇದ್ದರು.