ಮಂಡ್ಯ: ಮುಂಗಾರು ಮಳೆ ನಿರೀಕ್ಷಿತ ಸಮಯಕ್ಕೆ ಬಾರದೆ ರೈತರೇ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಯಾವಾಗ ಮಳೆ ಬರಬಹುದು ಎಂಬ ಆಸೆಯಿಂದ ಕಾಯುತ್ತಿದ್ದಾರೆ. ಭೂಮಿಗೆ ಹಾಕಿದ ಬೀಜಗಳು ಮೊಳಕೆಯೊಡೆಯುವ ಮುನ್ನವೆ ಮಳೆರಾಯ ನಾಪತ್ತೆಯಾಗಿದ್ದಾನೆ. ಹೀಗಿರುವಾಗ ಕಾವೇರಿ ನೀರಿನ ಬಗ್ಗೆಯೂ ಯೋಚಿಸಬೇಕು ಅಲ್ಲವೆ. ವಾಡಿಕೆಯಂತೆ ಮಳೆಯಾಗಿದ್ದರೆ ಕಾವೇರಿ ನೀರನ್ನು ತಮಿಳುನಾಡಿಗೂ ಹರಿಸಬಹುದಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯೋಚಿಸಲೇಬೇಕಾಗಿದೆ.
ರಾಜ್ಯದಲ್ಲಿ ಮಳೆಯಿಲ್ಲದೆ ಇದ್ದರು ತಮಿಳುನಾಡು ಮಾತ್ರ ಮಾಮೂಲಿಯಂತೆ ಕ್ಯಾತೆ ತೆಗೆಯುತ್ತಲೇ ಇದೆ. ಈ ಬಗ್ಗೆ ಸಂಸದೆ ಸುಮಲತಾ ಮಾತನಾಡಿದ್ದು, ಕಾವೇರಿ ವಿಚಾರದಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಒಂದಾಗಬೇಕು ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುಮಲತಾ, ನಾಡು, ನುಡಿ, ಜಲ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡಬಾರದು. ರಾಜ್ಯದ ರೈತರಿಗೆ, ಜನರಿಗೆ ಸಮಸ್ಯೆಯಾದರೆ ಎಲ್ಲರು ಒಂದಾಗಬೇಕು. ಇದರಲ್ಲಿ ರಾಜಕೀಯ, ಪಕ್ಷ ಅಂತ ಇರಬಾರದು. ಕಾವೇರಿ ಕಣಿವೆಯಲ್ಲಿ ನಾಲ್ಕು ವರ್ಷದಿಂದ ಉತ್ತಮ ಮಳೆಯಾಗಿತ್ತು. ಈ ವರ್ಷ ಮಳೆಯೂ ಆಗಿಲ್ಲ, ನೀರು ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಕಾವೇರಿ ನೀರು ಪ್ರಾಧಿಕಾರಕ್ಕೂ ಮನವಿ ಮಾಡಬೇಕು. ಅದರ ಜೊತೆಗೆ ಕೇಂದ್ರ ಸರ್ಕಾರಕ್ಕೂ ಈ ಸಂಬಂಧ ಪತ್ರ ಬರೆದಿದ್ದೇನೆ ಎಂದಿದ್ದಾರೆ.