ಸೋಷಿಯಲ್ ಮೀಡಿಯಾದಲ್ಲೆಲ್ಲಾ ಅಣ್ಣಾ ಮಲೈ ವಿಡಿಯೋನೆ ವೈರಲ್ ಆಗ್ತಾ ಇದೆ. ಇದ್ದಕ್ಕಿದ್ದ ಹಾಗೇ ದೊಡ್ಡ ಚಾಟಿಯಲ್ಲಿ ಅಣ್ಣಾ ಮಲೈ ತಮ್ಮ ದೇಹದ ಮೇಲೆ ಪಟಪಟನೆ ಹೊಡೆದುಕೊಂಡಿದ್ದಾರೆ. ಆ ಏಟನ್ನ ನೋಡುತ್ತಿದ್ದರೆ ನಮಗೇನೆ ಮೈ ಜುಮ್ ಎನಿಸುತ್ತದೆ. ಇದು ಪ್ರತಿಭಟನೆಯ ರೂಪ ಎನ್ನಲಾಗಿದೆ.
ಹೌದು, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ನಡುರಸ್ತೆಯಲ್ಲಿ ನಿಂತು ತಮ್ಮ ಅಂಗಿ ಬಿಚ್ಚಿ, ಚಾಟಿಯಿಂದ ಬಾರಿಸಿಕೊಂಡಿದ್ದಾರೆ. ತಮಿಳುನಾಡಿನ ಯೂನಿವರ್ಸಿಟಿಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣವನ್ನು ಖಂಡಿಸಿ, ಡಿಎಂಕೆ ಸರ್ಕಾರದ ವಿರುದ್ಧ ಅಣ್ಣಾಮಲೈ ಈ ರೀತಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಅಣ್ಣಾ ಯೂನಿವರ್ಸಿಟಿಯ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ಅಣ್ಣಾ ಮಲೈ ತಮಗೆ ತಾವೇ ಚಾಟಿ ಏಟು ಹೊಡೆದುಕೊಂಡಿದ್ದಾರೆ.
ಇನ್ನು ಈ ಸಂಬಂಧ ಶಪಥ ಮಾಡಿರುವ ಅಣ್ಣಾ ಮಲೈ, ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸುವ ತನಕ ನಾನು ಪಾದರಕ್ಷೆಗಳನ್ನು ಹಾಕಲ್ಲ ಎಂದಿದ್ದಾರೆ. ಜೊತೆಗೆ ಡಿಎಂಕೆ ಸರ್ಕಾರ ಮತ್ತು ಪೊಲೀಸರು ಸಂತ್ರಸ್ತೆಯ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ. ಅದು ಆಕೆಯ ಘನತೆಗೆ ಧಕ್ಕೆ ತಂದಿದೆ. ಇದು ಆಡಳಿತದ ಅಸಮರ್ಥನೆಯನ್ನು ತೋರುತ್ತದೆ. ಇದು ನಾಚಿಗೇಡಿನ ಕೃತ್ಯ. ಯೂನಿವರ್ಸಿಟಿಯಲ್ಲಿ ಸಿಸಿಟಿವಿ ಕ್ಯಾಮರಾಗಳ ಕೊರತೆ ಇದೆ. ಅಲ್ಲದೆ ಮಹಿಳೆಯರ ಸುರಕ್ಷತೆಗೆ ಉದ್ದೇಶಿರುವ ನಿರ್ಭಯಾ ನಿಧಿಯನ್ನು ರಾಜ್ಯವೂ ಎಷ್ಟರಮಟ್ಟಿಗೆ ಬಳಸಿದೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದಕ್ಕಾಗಿ ತಮಿಳುನಾಡು ಪೊಲೀಸರನ್ನು ಅಣ್ಣಾಮಲೈ ತರಾಟೆಗೆ ತೆಗೆದುಕೊಂಡಿದ್ದಾರೆ.