ಜಲಮೂಲ ಸಂರಕ್ಷಣೆಗೆ ಮುಂದಾಗಿ : ನ್ಯಾ. ಎಂ.ವಿಜಯ್ ಸಲಹೆ

2 Min Read

 

ಚಿತ್ರದುರ್ಗ. ಮಾ.22: ಜಲಮೂಲ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.

ನಗರದ ಒನಕೆ ಒಬವ್ವ ವೃತ್ತದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಪೆÇಲೀಸ್ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ನೆಹರು ಯುವ ಕೇಂದ್ರ ಹಾಗೂ ನಗರಸಭೆ ಸಹಯೋಗದಲ್ಲಿ ವಿಶ್ವ ಜಲ ದಿನ-2025ರ ಘೋಷವಾಕ್ಯ ಹಿಮನದಿ ಸಂರಕ್ಷಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪರಿಸರ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 

ಶುದ್ಧ ಕುಡಿಯುವ ನೀರು ಮನುಷ್ಯನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಕೂಡ ಇತ್ತೀಚೆಗೆ ತೀರ್ಮಾನ ಮಾಡಿದೆ. ನೀರಿನ ಮೂಲಗಳನ್ನು ರಕ್ಷಣೆ ಮಾಡಬೇಕು, ಜಲ ಮೂಲಗಳ ಸಂರಕ್ಷಣೆ ಕುರಿತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಿತಿಗಳನ್ನು  ರಚಿಸಲಾಗಿದೆ. ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಣೆ ಮಾಡುವುದು ಹಾಗೂ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಈ ಸಮಿತಿಗಳ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ ಅವರು, ಯುವ ಪೀಳಿಗೆಗೆ ಈ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿಯ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಆಸಿಫ್‍ಖಾನ್ ಮಾತನಾಡಿ, ಜಾಗತಿಕ ತಾಪಮಾನದಿಂದ ಹಿಮಾಲಯದಲ್ಲಿ ಹಿಮನದಿಗಳು ಹರಿಯುತ್ತಿವೆ, ಜಲ ಮೂಲಗಳು ಬತ್ತಿಹೋಗುತ್ತಿವೆ. ಈ ಕಾರಣದಿಂದ ಜಾಗತಿಕವಾಗಿ ಜಲ ಮೂಲಗಳ ಸಂರಕ್ಷಣೆಗಾಗಿ ಶ್ರಮಿಸಲಾಗುತ್ತಿದೆ. ಇದಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ತಿಳಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಎಂ.ಜೆ.ಮಹೇಶ್ ಮಾತನಾಡಿ, ವಿಶ್ವ ಜಲ ದಿನವನ್ನು ವರ್ಷಕ್ಕೊಮ್ಮೆ ಮಾತ್ರ ಆಚರಿಸುವುದಲ್ಲ, ನಮ್ಮಗಳ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಪ್ರತಿ ದಿನವೂ ಆಚರಿಸುವಂತಾಗಬೇಕು. ನೀರು ಹಾಗೂ ಜಲ ಮೂಲಗಳ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳು, ಯುವ ಸಮೂಹಕ್ಕೆ ಹೆಚ್ಚು ಹೆಚ್ಚು ಅರಿವು ಮತ್ತು ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಪರಿಸರ ಜಾಥಾಕ್ಕೆ ಚಾಲನೆ: ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇಗುಲದ ಮುಂಭಾಗದಲ್ಲಿ ವಿಶ್ವ ಜಲ  ದಿನ-2025ರ ಪರಿಸರ ಜಾಥಾ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

 

ನಗರದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟ ಜಾಥಾ ಗಾಂಧಿ ವೃತ್ತ, ಬಿ.ಡಿ. ರಸ್ತೆ, ಪ್ರವಾಸಿ ಮಂದಿರ ಮಾರ್ಗವಾಗಿ ಒನಕೆ ಓಬವ್ವ ವೃತ್ತ ತಲುಪಿ ನಂತರ ಮಾನವ ಸರಪಳಿ ನಿರ್ಮಿಸಲಾಯಿತು.
ನೀರು ಉಳಿಸಿ ಜೀವ ಉಳಿಸಿ, ನೀರು ಅಮೂಲ್ಯ ಅದನ್ನು ಬುದ್ದಿವಂತಿಕೆಯಿಂದ ಬಳಸಿ, ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮಳೆ ನೀರು ಸಂಗ್ರಹಿಸಿ ಮರುಬಳಕೆ ಮಾಡಿ, ಅಂತರ್ಜಲ ಮಿತ ಬಳಕೆ ಅತಿ ಬಳಕೆ, ನಮ್ಮ ಆಯ್ಕೆ ಸದ್ಬಳಕೆ, ನೀರು ಜೀವಜಲ, ಮಿತವಾಗಿ ಬಳಸಿ ಸಂರಕ್ಷಿಸಿ, ಸೇರಿದಂತೆ ಮತ್ತಿತರ ಘೋಷವಾಕ್ಯವಿರುವ ನಾಮಫಲಕಗಳನ್ನು ವಿದ್ಯಾರ್ಥಿಗಳು ಹಿಡಿದು ಘೋಷಣೆ ಕೂಗುವ ಮೂಲಕ ಸಾರ್ವಜನಿಕರಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಎನ್.ಸುಹಾಸ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪವಿತ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *