ರೈಲ್ವೆ ಅಂಡರ್, ಓವರ್ ಬ್ರಿಡ್ಜ್‌ ಗಳಲ್ಲಿ ನೀರು ಶೇಖರಣೆಯಾಗದಂತೆ ಶಾಶ್ವತ ಪರಿಹಾರ ಕೈಗೊಳ್ಳಿ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

3 Min Read

 

ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,  ಚಿತ್ರದುರ್ಗ

ಚಿತ್ರದುರ್ಗ,(ಅಕ್ಟೋಬರ್21) : ಜಿಲ್ಲಾ ವ್ಯಾಪ್ತಿಯ ರೈಲ್ವೆ ಅಂಡರ್, ಓವರ್ ಬ್ರಿಡ್ಜ್‍ಗಳಲ್ಲಿ ಯಾವುದೇ ಕಾರಣಕ್ಕೂ ಮಳೆ ನೀರು ಶೇಖರಣೆಯಾಗದ ರೀತಿ ಶಾಶ್ವತ ಪರಿಹಾರ ಕಾರ್ಯ ಕೈಗೊಳ್ಳುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ರೈಲ್ವೆ ಅಂಡರ್, ಓವರ್ ಬ್ರಿಡ್ಜ್‍ಗಳ ಸಮಸ್ಯೆ ಕುರಿತು ಸಾರ್ವಜನಿಕರಿಂದ ಬಂದ ದೂರು, ಅಹವಾಲುಗಳಲ್ಲಿ ಪ್ರಸ್ತಾಪಿಸಿರುವ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಅಗತ್ಯತೆಗಳ ಪೂರೈಕೆಗೆ ಸಂಬಂಧಪಟ್ಟಂತೆ ರೈಲ್ವೆ ಇಲಾಖೆ ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗಿದ್ದರಿಂದ ರೈಲ್ವೆ ಅಂಡರ್ ಹಾಗೂ ಓವರ್ ಬ್ರಿಡ್ಜ್‍ಗಳಲ್ಲಿ ಮಳೆ ನೀರು ಶೇಖರಣೆಯಾಗಿ ಸಾರ್ವಜನಿಕರ ಓಡಾಟಕ್ಕೆ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ರೈಲ್ವೆ ಕೆಳ ಸೇತುವೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕೈಗೊಳ್ಳುವಂತೆ ಸೂಚನೆ ನೀಡಿದರೂ ಅಗತ್ಯ ಕ್ರಮಕೈಗೊಂಡಿಲ್ಲ. ಹಾಗಾಗಿ ಶಾಶ್ವತ ಪರಿಹಾರ ಕಾರ್ಯಕ್ಕಾಗಿ ಹೊಸದಾಗಿ ಸೆನ್ಸರ್ ಪಂಪ್ (ಸ್ವಯಂ ಚಾಲಿತ) ವ್ಯವಸ್ಥೆ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ಹಿರೇಗುಂಟನೂರು, ಹಳಿಯೂರು ರಸ್ತೆ, ಮೆದೇಹಳ್ಳಿ ರಸ್ತೆ, ಗೋನೂರು-ಚಿತ್ರದುರ್ಗ ರೈಲ್ವೆ ಅಂಡರ್ ಬ್ರಿಡ್ಜ್‍ಗಳಲ್ಲಿ ಒಂದುವರೆ ಅಡಿ  ಮಳೆ ನೀರು ನಿಂತಿದೆ. ಇದು ಗಂಭೀರ ಸಮಸ್ಯೆಯಾಗಿದ್ದು, ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತೀರಾ ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಇಲಾಖೆ ಸಹಾಯಕ ವಿಭಾಗೀಯ ಅಭಿಯಂತರ ಸಮನ್ವಯಾಧಿಕಾರಿ ರವಿಚಂದ್ರನ್, ರೈಲ್ವೆ ಬ್ರಿಡ್ಜ್‍ಗಳಲ್ಲಿ ಮಳೆ ನೀರು ನಿಲ್ಲದಂತೆ ಕ್ರಮವಹಿಸಲಾಗುತ್ತಿದೆ. ನೀರು ಹೊರಹಾಕಲು ಹೆಚ್ಚುವರಿ ಪಂಪ್ ಅವಳಡಿಸಿ, ನೀರು ನೀರು ಹಾಕಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ರೈಲ್ವೆ ಅಂಡರ್ ಬ್ರಿಡ್ಜ್‍ಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ನೀರು ಶೇಖರಣೆಯಾಗಿರುವುದರಿಂದ ರಸ್ತೆಯು ಹಾಳಾಗಿದೆ.  ಇದೇ ರೀತಿ ಜಿಲ್ಲೆಯ ಉಳಿದ ರೈಲ್ವೆ ಅಂಡರ್ ಬ್ರಿಡ್ಜ್‍ಗಳ ಬಳಿ ಹಾಳಾದ ರಸ್ತೆಯ ದುರಸ್ಥಿ ಕಾರ್ಯ ಮಾಡುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರೈಲ್ವೆ ಅಂಡರ್ ಬ್ರಿಡ್ಜ್‍ಗಳಿಗೆ ರೈಲ್ವೆ, ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ನಗರಸಭೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ವೀಕ್ಷಣೆ ಮಾಡಿ, ಮಳೆ ನೀರು ಬಾರದಂತೆ ತಡೆಯುವುದರ ಬಗ್ಗೆ, ತಡೆಗೋಡೆ ನಿರ್ಮಾಣ ಗುರುತಿಸುವಿಕೆ ಹಾಗೂ ಶಾಶ್ವತ ಪರಿಹಾರಕ್ಕಾಗಿ ಸೆನ್ಸಾರ್ ಮೋಟಾರ್ ಪಂಪ್ ಅಳವಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗಕ್ಕೆ ಸಂಬಂಧಪಟ್ಟಂತೆ ತುಮಕೂರಿನಿಂದ ಶಿರಾವರೆಗೆ ಅವಾರ್ಡ್ ಬಾಕಿ ಇದೆ. ಇದಕ್ಕೆ ಬೇಕಾದ ಅನುದಾನವೂ ಲಭ್ಯವಿದೆ. ಶಿರಾದಿಂದ ಹಿರಿಯೂರು ತಲುಪವರೆಗೆ 8 ಕಿ.ಮೀ ಅವಾರ್ಡ್ ಆಗಿದೆ. ಇನ್ನೂ 12 ಕಿ.ಮೀ ಅವಾರ್ಡ್ ಆದರೆ ತುಮಕೂರು ಹಾಗೂ ಶಿರಾ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ದಾವಣಗೆರೆಯಿಂದ ಭರಮಸಾಗರ ಗಡಿವರೆಗೂ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಭರಮಸಾಗರದಿಂದ ಸಿರಿಗೆರೆವರೆಗೂ ಅವಾರ್ಡ್ ಬಾಕಿ ಇದೆ. ಇದು ಮುಕ್ತಾಯವಾದ ನಂತರ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಚಿತ್ರದುರ್ಗದಿಂದ ಸಿರಾವರೆಗೆ ಇನ್ನೂ ರೂ.100 ಕೋಟಿ ಅನುದಾನದ ಅವಶ್ಯಕತೆ ಇರುವುದಿರಂದ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ತುಮಕೂರು ಹಾಗೂ ದಾವಣಗೆರೆ ಎರಡು ಕಡೆಗಳಿಂದಲೂ ಕಾಮಗಾರಿ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ರೈಲ್ವೆ ಅಂಡರ್ ಹಾಗೂ ಓವರ್ ಬ್ರಿಡ್ಜ್‍ಗಳಿಗೆ ಕೇವಲ ಮಳೆ ನೀರು ನಿಂತಾಗ ಮಾತ್ರವಲ್ಲದೇ, ನಿಯಮಿತವಾಗಿ ವೀಕ್ಷಣೆ ಮಾಡಿ ಸಾರ್ವಜನಿಕರಿಗೆ ಸಂಚಾರ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚನೆ ನೀಡಿದ ಅವರು, ಚಿತ್ರದುರ್ಗ ನಗರದ ಎಪಿಎಂಸಿಯಲ್ಲಿ ರೈಲ್ವೆ ಇಲಾಖೆ ವತಿಯಿಂದ ಕೈಗೊಂಡಿರುವ ಕಾಮಗಾರಿ ಬಹಳ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಸೂಕ್ತ ಮಾರ್ಗದರ್ಶನ ನೀಡಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಹುಬ್ಬಳಿಯ ನೈರುತ್ಯ ರೈಲ್ವೆ ಇಲಾಖೆ ಮುಖ್ಯ ಯೋಜನಾ ನಿರ್ದೇಶಕ ವಿಜಯ್ ಕಿಟಕಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‍ವಾಲ್, ವಿಭಾಗೀಯ ಅಭಿಯಂತರ ಸಮನ್ವಯಾಧಿಕಾರಿ ರವಿಚಂದ್ರನ್, ವಿಭಾಗೀಯ ಅಭಿಯಂತರ ರೋಹನ್ ಡೋಂಗ್ರೆ, ಸಹಾಯಕ ವಿಭಾಗೀಯ ಅಭಿಯಂತರ ಶುಭಂ ಶರ್ಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *