ಮುಪ್ಪಿನ ಕಾಲದಲ್ಲಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಲಹೆ

2 Min Read

 

ಚಿತ್ರದುರ್ಗ,( ಸೆಪ್ಟಂಬರ್ 27) : ಮುಪ್ಪಿನ ಕಾಲದಲ್ಲಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಲಹೆ ನೀಡಿದರು.

ನಗರದ ಬುದ್ಧನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಹಿರಿಯ ನಾಗರಿಕರ ಸಪ್ತಾಹ ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಚಿಕ್ಕವರಿರುವಾಗ ನಮ್ಮ ತಂದೆ-ತಾಯಿ ಸಾಕಷ್ಟು ಕಾಳಜಿಯಿಂದ ನಮ್ಮ ಸಾಕಿ ಸಲಹುತ್ತಾರೆ. ಆದರೆ ಮಕ್ಕಳು ದೊಡ್ಡವರಾದ ಮೇಲೆ ಅವರನ್ನು ನೋಡಿಕೊಳ್ಳುವುದೇ ಇಲ್ಲ. ಕೆಲವು ಹಿರಿಯರು ಅನುಕೂಲವಾಗಿರುತ್ತಾರೆ. ಇನ್ನೂ ಕೆಲವು ಹಿರಿಯರ ಕಥೆ ಬಹಳ ಶೋಚನೀಯವಾಗಿರುತ್ತದೆ. ಅಂಥವರನ್ನು ನೆನೆದರೆ ಬಹಳ ದುಃಖವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಕ್ಕಳು ಪೋಷಕರನ್ನು ನೋಡಿಕೊಳ್ಳದಿದ್ದಲ್ಲಿ ಅಂತವರಿಗೆ ಸರ್ಕಾರ ನಿರಾಶ್ರಿತರ ಕೇಂದ್ರಗಳನ್ನು ಸ್ಥಾಪಿಸಿ ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ತಿಳಿಸಿದರು.

ಹಿರಿಯ ನಾಗರೀಕರಿಗೆ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಎಲ್ಲರೂ ಒಟ್ಟಾಗಿ ಪಾಲ್ಗೊಳ್ಳುವುದರಿಂದ ಸಂತೋಷವಾಗುತ್ತದೆ. ಹಿರಿಯ ನಾಗರಿಕರು  ಸರ್ಕಾರ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹಿರಿಯ ನಾಗರಿಕರಾದ ಜಯಪ್ರಕಾಶ್ ಅಭಿಪ್ರಾಯ ಹಂಚಿಕೊಂಡರು.

ಮನೆಯಲ್ಲಿರುವವರು ಅವರವರ ಕೆಲಸದಲ್ಲಿ ತೊಡಗಿರುತ್ತಾರೆ ಹಾಗಾಗಿ ಹಿರಿಯರಿಗೆ ದಿನವೀಡಿ ಮನೆಯಲ್ಲಿ ಇದ್ದು ಒಂಟಿತನ ಕಾಡುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಬಂದು ಅವರನ್ನು ತೊಡಗಿಸಿಕೊಳ್ಳವುದರಿಂದ ಅವರ ಮನಸ್ಸಿಗೂ ಸಹ ನೆಮ್ಮದಿ ಸಿಗುತ್ತದೆ ಎಂದು ಹಿರಿಯ ನಾಗರಿಕರಾದ ಲತಾ ಅಭಿಪ್ರಾಯಪಟ್ಟರು.

ಹಿರಿಯ ಪುರುಷ ಮತ್ತು ಮಹಿಳಾ ನಾಗರೀಕರಿಗೆ 50 ಮೀಟರ್ 100 ಮೀಟರ್ ಮತ್ತು 200 ಮೀಟರ್ ನಡಿಗೆ, ರಿಂಗ್ ಅನ್ನು ಬಕೆಟ್‍ಗೆ ಹಾಕುವುದು, ಮೂಜಿಕಲ್ ಚೇರ್ಸ್, ಏಕಪಾತ್ರ ಅಭಿನಯ, ಗಾಯನ ಸ್ಫರ್ಧೆ, ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಮಂಜುನಾಥ ಅವರು ಕ್ರೀಡೆಯಲ್ಲಿ ಪಾಲ್ಗೊಂಡ ಹಿರಿಯ ನಾಗರಿಕರಿಗೆ  ಟೀಶರ್ಟ್ ಮತ್ತು ಟೋಪಿಯನ್ನು ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ವೈ.ಚಂದ್ರಶೇಖರಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಭಾರತಿ ಆರ್.ಬಣಕಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀ, ಹಿರಿಯ ನಾಗರಿಕರ ಜಿಲ್ಲಾ ಸಂಘದ ಅಧ್ಯಕ್ಷ ರಂಗಪ್ಪ ರೆಡ್ಡಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *