ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕ್ರಮವಹಿಸಿ : ಸಚಿವ ಡಿ.ಸುಧಾಕರ್ ಸೂಚನೆ

5 Min Read

ಚಿತ್ರದುರ್ಗ. ಅ.14: ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಸುಧಾರಿಸಲು ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಜರುಗಿದ ತ್ರೆöÊಮಾಸಿಕ ಕೆಡಿಪಿ ಹಾಗೂ 20 ಅಂಶಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮವಹಿಸಬೇಕು. ಈ ಹಿನ್ನಲೆಯಲ್ಲಿ ಸಂಬAಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಶಾಲೆಯ ಮುಖ್ಯ ಶಿಕ್ಷಕರಿಗೆ ಜವಾಬ್ದಾರಿ ಗೊತ್ತುಪಡಿಸುವಂತೆ ಸಚಿವ ಡಿ.ಸುಧಾಕರ್ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಅವರಿಗೆ ಸೂಚನೆ ನೀಡಿದರು.
ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮ ಸುಧಾರಣೆಗಾಗಿ ಅಗತ್ಯ ಕ್ರಮ ವಹಿಸಲಾಗಿದೆ. ಪ್ರತಿ ಶಾಲೆಯಲ್ಲಿಯೂ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಗುಂಪು ಅಧ್ಯಯನ, ಘಟಕ ಪರೀಕ್ಷೆ, ವೇಕಾಪ್ ಕಾಲ್ ಸೇರಿದಂತೆ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರಗಳ ನಡೆಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಸಭೆಗೆ ಮಾಹಿತಿ ನೀಡಿದರು. ಪ್ರತಿಕ್ರಿಯಿಸಿದ ಸಚಿವರು ಎಸ್‌ಎಸ್‌ಎಲ್‌ಸಿ ಫಲಿತಾಂಶದ ಗುಣಮಟ್ಟ ಹೆಚ್ಚಬೇಕು, ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ವಿಷಯವಾರು ಯೋಜನೆಗಳನ್ನು ರೂಪಿಸಿ, ಉತ್ತಮ ಫಲಿತಾಂಶ ತರಬೇಕು ಎಂದು ತಾಕೀತು ಮಾಡಿದರು.

ವಸತಿ ಶಾಲೆಗಳ ಅವ್ಯವಸ್ಥೆಗೆ ಅಸಮಧಾನ:
ಕ್ರೆöÊಸ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ವತಿಯಿಂದ ಜಿಲ್ಲೆಯಲ್ಲಿ ನಡೆಸುತ್ತಿರುವ ವಸತಿ ಶಾಲೆಗಳ ನಿರ್ವಹಣೆ ಸರಿಯಿಲ್ಲ. ವಿದ್ಯಾರ್ಥಿಗಳಿಗೆ ಬಿಸಿ ನೀರು ಸಿಗುತ್ತಿಲ್ಲ. ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕಿನ ವಸತಿ ಶಾಲೆಗಳಿಗೆ ಖುದ್ದು ಭೇಟಿ ನೀಡಿದ್ದೇನೆ. ಈ ಶಾಲೆಗಳು ಅವ್ಯವಸ್ಥೆಗಳ ಆಗರವಾಗಿವೆ. ವಿದ್ಯಾರ್ಥಿಗಳು ನೇರವಾಗಿ ನನಗೆ ಕರೆ ಮಾಡಿ ದೂರು ಹೇಳುತ್ತಾರೆ. ಈ ವಸತಿ ಶಾಲೆಗಳಿಗೆ ಸಂಬAಧ ಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಎಂದಾದರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೀರಾ? ಎಂದು ಪ್ರಶ್ನಿಸಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ನೂರಾರು ಕೋಟಿ ಖರ್ಚು ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿ, ಉತ್ತಮ ಮೂಲಭೂತ ಸೌಕರ್ಯಗಳನ್ನು ವಸತಿ ಶಾಲೆಗಳಿಗೆ ಸರ್ಕಾರ ನೀಡಿದೆ. ಆದರೆ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷö್ಯ ತೋರುವುದು ಸರಿಯಲ್ಲ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆ ಸೇರಿದ ತಲಾ 16, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ತಲಾ 4 ವಸತಿ ಶಾಲೆಗಳು ಜಿಲ್ಲೆಯಲ್ಲಿವೆ. ಈ ಎಲ್ಲಾ ಶಾಲೆಗಳಲ್ಲಿ ಆರನೇ ತರಗತಿ ಪ್ರವೇಶಕ್ಕೆ 1670 ಸೀಟುಗಳು ಮಂಜೂರಾಗಿವೆ. ಪ್ರಸಕ್ತ ಸಾಲಿಗೆ ವಸತಿ ಶಾಲೆಗಳ ಪ್ರವೇಶಕ್ಕೆ 6500 ಅರ್ಜಿಗಳು ಬಂದಿದ್ದು, ಇದರಲ್ಲಿ 1760 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರವೇಶ ನೀಡಲಾಗಿದೆ. ವಸತಿ ಶಾಲೆಗಳಲ್ಲಿ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ವಸತಿ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸಭೆಯಲ್ಲಿ ತಿಳಿಸಿದರು.

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹಿರಿಯೂರು ತಾಲ್ಲೂಕಿಗೆ ಮಂಜೂರಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಹಿರಿಯೂರು ತಾಲ್ಲೂಕು ಜೆ.ಜೆ.ಹಳ್ಳಿ ಹೋಬಳಿ ಆದಿವಾಲ ಗ್ರಾಮದ ಸರ್ವೇ ನಂ.77ರಲ್ಲಿ 5 ಎಕರೆ ನಿವೇಶನ ಗುರುತಿಸಿ, ಜಿಲ್ಲಾಧಿಕಾರಿಗಳಿಗೆ ಸ್ಥಳ ಮಂಜೂರಾತಿ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಾಂತರಾಜು ಸಭೆಯಲ್ಲಿ ಮಾಹಿತಿ ನೀಡಿದರು.
ಅಲೆಮಾರಿ ಮತ್ತು ಅರೆ ಅಲೆಮಾರಿ ಮಕ್ಕಳಿಗಾಗಿ 3 ವಸತಿ ಶಾಲೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ 1 ವಸತಿ ಶಾಲೆ ಹಿರಿಯೂರು ತಾಲ್ಲೂಕಿ ಮಂಜೂರಾಗಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಕುರಿತು ಅಗತ್ಯ ಕ್ರಮಕೈಗೊಳ್ಳುವಂತೆ ವಿಧಾರ ಪರಿಷತ್ ಸದಸ್ಯ ಶ್ರೀನಿವಾಸ ಸಭೆಯಲ್ಲಿ ಸೂಚನೆ ನೀಡಿದರು.

ಅರಸನ ಕೆರೆ ತ್ಯಾಜ್ಯ ನೀರು ಶುದ್ದೀಕರಣ ಘಟಕ ಸ್ಥಾಪನೆ:
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಎಂ.ಕೆ.ಹಟ್ಟಿಯ ಅರಸನ ಕೆರೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಕೆರೆಗೆ ನಗರದ ತ್ಯಾಜ್ಯ ನೀರು ಸೇರುತ್ತಿರುವುದರಿಂದ ಕೆರೆಯ ಆವಾಸ ಸ್ಥಾನ ಕಲುಷಿತಗೊಂಡಿದೆ. ಇದಕ್ಕೆ ಪರಿಹಾರವಾಗಿ ಕೆರೆಯ ಬಳಿ ತ್ಯಾಜ್ಯ ನೀರು ಶುದ್ದೀಕರಣ ಘಟಕ ಸ್ಥಾಪಸಿ, ತ್ಯಾಜ್ಯ ನೀರು ಶುದ್ದೀಕರಿಸಿ ಕೆರೆಗೆ ಹರಿಸುವಂತೆ ನಗರಸಭೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಸಭೆಯಲ್ಲಿ ಮಾಹಿತಿ ನೀಡಿದರು.

ಮಲ್ಲಾಪುರ ಕೆರೆ ನೀರು ಸಹ ಕಲುಷಿತಗೊಂಡಿದೆ. ಅಧಿಕಾರಿಗಳು ತ್ಯಾಜ್ಯ ನೀರು ಶುದ್ದೀಕರಣ ಘಟಕ ಕಾರ್ಯಾರಂಭ ಮಾಡಿ ನೀರು ಶುದ್ದೀಕರಿಸಿ ಕೆರೆಗೆ ಬಿಡುವ ಕೆಲಸ ಮಾಡಬೇಕು ಎಂದು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಸಭೆಯಲ್ಲಿ ತಿಳಿಸಿದರು. ತಾತ್ಕಾಲಿಕವಾಗಿ ಮಲ್ಲಾಪುರ ಕೆರೆ ಬಳಿಯ ಶುದ್ದೀಕರಣ ಘಟಕ ಸಂಪರ್ಕ ರಸ್ತೆ ಕಲ್ಪಿಸಿ ತ್ಯಾಜ್ಯ ನೀರನ್ನು ಶುದ್ದೀಕರಿಸಿ ಕೆರೆ ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಹೊರ ಜಿಲ್ಲಾ ಆಸ್ಪತ್ರೆಗಳಿಗೆ ರೋಗಿಗಳ ಶಿಫಾರಸ್ಸಿಗೆ ತಡೆಗೆ ಸೂಚನೆ:
ಸರ್ಕಾರ ಕೋಟ್ಯಾಂತರ ರೂ.ಗಳನ್ನು ಸರ್ಕಾರಿ ಆಸ್ಪತ್ರೆಗಾಗಿ ಖರ್ಚು ಮಾಡುತ್ತಿದೆ. ಆದರೆ, ಇಲ್ಲಿ ಬಡವರಿಗೆ ಸರಿಯಾದ ಚಿಕಿತ್ಸೆಯೇ ಸಿಗುವುದಿಲ್ಲ ಎಂದರೆ ಹೇಗೆ?. ಮೊಳಕಾಲ್ಮೂರಿನಿಂದ ಸಾಕಷ್ಟು ರೋಗಿಗಳು ಬಳ್ಳಾರಿಗೆ ಹೋಗುತ್ತಿದ್ದಾರೆ ಎಂದು ಸಚಿವ ಸುಧಾಕರ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದರು. ಹೊರ ಜಿಲ್ಲಾ ಆಸ್ಪತ್ರೆಗಳಿಗೆ ರೋಗಿಗಳ ಶಿಫಾರಸ್ಸು ಮಾಡುವುದನ್ನು ತಡೆಯಲು ಸಚಿವ ಡಿ.ಸುಧಾಕರ್ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಯಿಂದ ಸಣ್ಣ ಪುಟ್ಟ ಕಾಯಿಲೆಗೆ ಹೋದ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಕೊಡದೇ ಬಸವೇಶ್ವರ ಆಸ್ಪತ್ರೆ, ಮಣಿಪಾಲ, ದಾವಣಗೆರೆ, ಮಂಗಳೂರು, ಬೆಂಗಳೂರು ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಿಗೆ ಬರುವ ಬಹುತೇಕ ರೋಗಿಗಳು ಬಡವರೇ ಆಗಿರುತ್ತಾರೆ. ಅವರ ಬಳಿ ಹಣ ಇರುವುದಿಲ್ಲ. ಅವರನ್ನು ಮಂಗಳೂರು, ಬೆಂಗಳೂರಿಗೆ ಶಿಫಾರಸ್ಸು ಮಾಡದಂತೆ ಶಾಸಕ ಎಂ.ಚAದ್ರಪ್ಪ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತçಚಿಕಿತ್ಸಕರಿಗೆ ತಿಳಿಸಿದರು.

ಮುಂದಿನ ಕೆಡಿಪಿ ಸಭೆಯಲ್ಲಿ ಕೋವಿಡ್ ವೇಳೆ ಚಿತ್ರದುರ್ಗ ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೆ ಸರ್ಕಾರದಿಂದ ಎಷ್ಟು ಅನುದಾನ ಬಂದಿತ್ತು, ಎಷ್ಟು ಖರ್ಚಾಗಿದೆ. ಆಗ ಖರೀಧಿಸಿದ ವಸ್ತುಗಳು ಎಲ್ಲಿವೆ, ಸಿಎಸ್‌ಆರ್ ನಿಧಿ ಎಷ್ಟು ಬಂದಿತ್ತು ಎಲ್ಲ ವಿವರಗಳನ್ನು ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಡಿ.ಸುಧಾಕರ್ ಹಾಗೂ ಶಾಸಕ ಚಂದ್ರಪ್ಪ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಣ್ಣ ಸೇರಿದಂತೆ ಕೆಡಿಪಿ ನಾಮನಿರ್ದೇಶಿತ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *