ಅತಿಸಾರ ಭೇದಿ ನಿಯಂತ್ರಣಕ್ಕೆ ಕ್ರಮವಹಿಸಿ : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ

3 Min Read

ಚಿತ್ರದುರ್ಗ,(ಜುಲೈ. 26) : ಜಿಲ್ಲೆಯಲ್ಲಿರುವ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಒಆರ್‍ಎಸ್ ಮತ್ತು ಝಿಂಕ್ ಮಾತ್ರೆಗಳನ್ನು ಮನೆ-ಮನೆಗೆ ತಲುಪಿಸಿ, ಅತಿಸಾರ ಭೇದಿ ನಿಯಂತ್ರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅತಿಸಾರ ಬೇದಿ ನಿಯಂತ್ರಣ ಪಾಕ್ಷಿಕ ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮದ ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಆಗಸ್ಟ್ 01 ರಿಂದ 14 ರವರೆಗೆ ನಡೆಯುವ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಾಕೀತು ಮಾಡಿದರು.

ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ ಮಾತನಾಡಿ,  ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕವನ್ನು ಆಗಸ್ಟ್ 01 ರಿಂದ 14 ರವರೆಗೆ ಆಚರಿಸಲಾಗುವುದು. ಈಗಾಗಲೇ ಕಳೆದ ಏಳು ವರ್ಷಗಳಿಂದಲೂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಯಶಸ್ವಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಐದು ವರ್ಷದೊಳಗಿನ 1 ಲಕ್ಷದ 54 ಸಾವಿರ ಮಕ್ಕಳನ್ನು ಗುರುತಿಸಲಾಗಿದೆ. ಐದು ವರ್ಷದೊಳಗಿನ ಮಕ್ಕಳ ಮನೆಗೆ ಆಶಾ ಕಾರ್ಯಕರ್ತರು ಭೇಟಿ ನೀಡಲಿದ್ದು, ಓಆರ್‍ಎಸ್ ದ್ರಾವಣ, ಝಿಂಕ್ ಮಾತ್ರೆ ನೀಡಲು ಅಗತ್ಯ ಕ್ರಮವಹಿಸಲಾಗಿದೆ. ಮಕ್ಕಳಲ್ಲಿ ತೀವ್ರವಾದ ಅತಿಸಾರ ಭೇದಿ ಕಂಡುಬಂದಲ್ಲಿ ತಾಯಂದಿರು ಓಆರ್‍ಎಸ್ ದ್ರಾವಣವನ್ನು ಹೇಗೆ ಮಕ್ಕಳಿಗೆ ತಯಾರಿಸಿ ಕೊಡಬೇಕು ಎಂಬುದರ ಬಗ್ಗೆಯೂ ಅರಿವು ಮೂಡಿಸಲಾಗುವುದು. ಪೌಷ್ಠಿಕ ಆಹಾರ ಬಳಕೆ ಮತ್ತು ಕೈ ತೊಳೆಯುವ ಮಹತ್ವದ ಬಗ್ಗೆ ಹಾಗೂ ಎದೆ ಹಾಲುಣಿಸುವ ತಾಯಂದಿರು ಕನಿಷ್ಟ ಆರು ತಿಂಗಳು ಮಕ್ಕಳಿಗೆ ಹಾಲುಣಿಸುವ ಮಹತ್ವವನ್ನು ಕುರಿತು ಹಾಗೂ ಸ್ವಚ್ಛತೆ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮನವರಿಕೆ ಮಾಡಿಕೊಡುವರು ಎಂದರು. ಇದರ ಜೊತೆಗೆ ವಯಸ್ಸಿಗೆ ಅನುಗುಣವಾಗಿ ಮಕ್ಕಳಿಗೆ ಎಲ್ಲ ಲಸಿಕೆಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿ, ಪ್ರಗತಿ ಸಾಧಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಅತಿಸಾರ ನಿಯಂತ್ರಣ ಪಾಕ್ಷಿಕ ಅಂಗವಾಗಿ ತಾಲ್ಲೂಕು ಮಟ್ಟದಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹೆಚ್ಚು ಮಾಹಿತಿ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಕ್ರಮವಹಿಸಬೇಕಿದೆ ಎಂದರು.

ಆಗಸ್ಟ್ 10ರಂದು ರಾಷ್ಟ್ರೀಯ ಜಂತುಹುಳು ನಿಯಂತ್ರಣ ಕಾರ್ಯಕ್ರಮ: ರಾಷ್ಟೀಯ ಜಂತುಹುಳು ನಿಯಂತ್ರಣಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಗಸ್ಟ್ 10 ರಂದು ಆಚರಿಸಲಾಗುತ್ತಿದ್ದು, 01 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತು ಹುಳು ನಿವಾರಣೆಯ ಅಲ್ಬಂಡ್‍ಜೋಲ್ ಮಾತ್ರೆಗಳನ್ನು ವಿತರಿಸಬೇಕು. ಯಾವುದೇ ಮಕ್ಕಳು ಇದರಿಂದ ಹೊರಗುಳಿಯಬಾರದು. ಪ್ರತಿಯೊಬ್ಬರಿಗೂ ಮಾತ್ರೆಗಳನ್ನು ವಿತರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೂಚನೆ ನೀಡಿದರು.

ಆಗಸ್ಟ್ 16 ರಿಂದ ಸೆಪ್ಟೆಂಬರ್ 03 ರವರೆಗೆ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನ: ಆಗಸ್ಟ್ 16 ರಿಂದ ಸೆಪ್ಟೆಂಬರ್ 03 ರವರೆಗೆ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನವನ್ನು ಪಲ್ಸ್ ಪೊಲಿಯೋ ಮಾದರಿ ರೀತಿಯಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕುಷ್ಟರೋಗ ನಿವಾರಣಾಧಿಕಾರಿ ಡಾ.ರೂಪ ಹೇಳಿದರು.

ಜಿಲ್ಲೆಯಲ್ಲಿ 14 ದಿನಗಳ ಕಾಲ ಕುಷ್ಟ ರೋಗ ಪತ್ತೆ ಹಚ್ಚುವ ಅಭಿಯಾನ ನಡೆಯಲಿದ್ದು, ಈ ಸಮೀಕ್ಷಾ ಕಾರ್ಯವನ್ನು ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಕರು ಕಾರ್ಯ ನಿರ್ವಹಿಸಲಿದ್ದಾರೆ. ಎಲ್ಲ ಸಮೀಕ್ಷೆಗಳಿಗಿಂತ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನ ವಿಭಿನ್ನವಾಗಿರಲಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಫೋಟೊ ವಿವರ: ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನದ ಪೋಸ್ಟರ್‍ಗಳನ್ನು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಬಿಡುಗಡೆಗೊಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿಹೆಚ್‍ಓ ಡಾ.ರಂಗನಾಥ್, ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *