ರಸಗೊಬ್ಬರ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ

2 Min Read

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

 

ಚಿತ್ರದುರ್ಗ,(ಜೂನ್. 02) : ಜಿಲ್ಲೆಗೆ ಕೇಂದ್ರ ಕಚೇರಿಯಿಂದ ನಿಯೋಜನೆಯಾಗಿರುವ ರಸಗೊಬ್ಬರ ಸರಬರಾಜಿನಲ್ಲಿ ಯಾವುದೇ ಕಾರಣಕ್ಕೂ ವ್ಯತ್ಯಯವಾಗದಂತೆ ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ 2023-24ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಬಗ್ಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಲಭ್ಯತೆ ಮತ್ತು ಕೇಂದ್ರ ಕಚೇರಿಯಿಂದ ನಿಯೋಜಿತ ರಸಗೊಬ್ಬರ ಸರಬರಾಜು ಬಗ್ಗೆ ಬೀಜ ಹಾಗೂ ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳು, ವಿತರಕರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೇಲು ಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಲು ಮತ್ತು ಎಲ್ಲಾ ರಸಗೊಬ್ಬರ ಸರಬರಾಜು ಮಾಡುವ ಕಂಪನಿ ಪ್ರತಿನಿಧಿಗಳಿಗೆ ಕಾಪು ದಾಸ್ತಾನಿನಲ್ಲಿ ಕೆ.ಎಸ್.ಎಸ್.ಸಿ. ಮತ್ತು ಮಾರ್ಕೆಟಿಂಗ್ ಫೆಡರೇಶನ್‍ಗೆ ನಿಯಮದಂತೆ ಶೇ.40ರಷ್ಟು ದಾಸ್ತಾನನ್ನು ಜೂನ್ ಅಂತ್ಯದೊಳಗೆ ಸರಬರಾಜು ಮಾಡಬೇಕು ಎಂದು ತಾಕೀತು ಮಾಡಿದರು.

ಕೃಷಿ ಪರಿಕರ ಮಾರಾಟಗಾರರು ನಿಗಧಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು. ಹಾಗೂ ಗೊಬ್ಬರಗಳ ಜೊತೆ ಬೇರೆ ಕೃಷಿ ಪರಿಕರಗಳನ್ನು ಕಡ್ಡಾಯವಾಗಿ ಲಿಂಕ್ ಮಾಡದೇ ರೈತರಿಗೆ ಅವಶ್ಯಕತೆಯಿರುವ ಕೃಷಿ ಪರಿಕರಗಳನ್ನು ವಿತರಿಸಲು ಸೂಚನೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ  ಡಾ. ರಮೇಶ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿದ್ದು, ಯಾವುದೇ ವ್ಯತ್ಯಯವಾಗದಂತೆ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ರೇಕ್ ಪಾಯಿಂಟ್ ಇದ್ದರೂ ಕೂಡ ರಸಗೊಬ್ಬರ ಸರಬರಾಜು ಮಾಡುವ ಕಂಪನಿಗಳು ನೇರವಾಗಿ ಸರಬರಾಜು ಮಾಡದೇ, ದಾವಣಗೆರೆ ರೇಕ್ ಪಾಯಿಂಟ್‍ನಿಂದ ಚಿತ್ರದುರ್ಗ ಜಿಲ್ಲೆಗೆ ಸರಬರಾಜು ಮಾಡುತ್ತಿರುವುದು ಕಂಡುಬಂದಿರುತ್ತದೆ.

ಆದ್ದರಿಂದ ಚಿತ್ರದುರ್ಗ ಜಿಲ್ಲೆಯ ರೇಕ್ ಪಾಯಿಂಟ್‍ಗೆ ನೇರವಾಗಿ ಸರಬರಾಜು ಮಾಡಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಅವರು, ಆಗ ರಸಗೊಬ್ಬರ ಸರಬರಾಜು ಮಾಡುವ ಕಂಪನಿ ಪ್ರತಿನಿಧಿಗಳು ಜಿಲ್ಲೆಯಲ್ಲಿ ರೈಲ್ವೆ ಪ್ಲಾಟ್‍ಫಾರಂ, ಸಿಮೆಂಟ್ ಪ್ಲಾಟ್‍ಫಾರಂ ಮತ್ತು ಗೋದಾಮು ಅವಶ್ಯಕತೆಯಿದ್ದು, ಇವುಗಳು ಲಭ್ಯವಾದಲ್ಲಿ ಚಿತ್ರದುರ್ಗ ಜಿಲ್ಲೆಯ ರೇಕ್ ಪಾಯಿಂಟ್ ಮೂಲಕ ರಸಗೊಬ್ಬರ ಒದಗಿಸಲಾಗುವುದು ಎಂದು ಕಂಪನಿಯ ಪ್ರತಿನಿಧಿಗಳು ಸಭೆಗೆ ತಿಳಿಸಿದರು.

ಇದಕ್ಕೆ ಸಂಧಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‍ಜೆ ಅವರು, ರೈಲ್ವೆ ಇಲಾಖೆಯವರಿಗೆ ಸಿಮೆಂಟ್ ಪ್ಲಾಟ್‍ಫಾರಂ ನಿರ್ಮಿಸಲು ಪ್ರಸ್ತಾವ ಸಲ್ಲಿಸಲು ತಿಳಿಸಿ, ಗೋದಾಮು ನಿರ್ಮಿಸಲು ಸೂಕ್ತ ಸ್ಥಳವನ್ನು ಗುರುತಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕರಾದ ಪ್ರಭಾಕರ್, ಶಿವಕುಮಾರ್, ವಿಚಕ್ಷಣದ ದಳದ ಲೋಕೇಶ್ ಸೇರಿದಂತೆ ಎಲ್ಲ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಬೀಜ ಹಾಗೂ ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳು, ವಿತರಕರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *