ಚಿತ್ರದುರ್ಗ, ಡಿಸೆಂಬರ್. 02 : ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗ ನಗರದ ವಿವಿಧ ಪ್ರದೇಶಗಳಲ್ಲಿ ಅಪಘಾತ ಸಂಭವಿಸಬಹುದಾದ ತೆರೆದ ಚರಂಡಿಗಳು, ರಾಜಕಾಲುವೆ, ಡ್ರೈನೇಜ್‍ಗಳು, ರಸ್ತೆಯಲ್ಲಿಯೇ ಬೋರ್‍ವೆಲ್ ಮುಂತಾದ ವಿವರಗಳೊಂದಿಗೆ ಫೋಟೋಗಳ ಸಹಿತ ಸಂಚಾರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ವಿಶ್ವನಾಥ್ ಅವರು ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಅಪಘಾತ ಸಂಭವಿಸಬಹುದಾದ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ದುರಸ್ತಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿತ್ರದುರ್ಗ ನಗರದಲ್ಲಿ ಟ್ರಾಫಿಕ್ ಸಿಗ್ನಲ್‍ಗಳ ನಿರ್ವಹಣೆ, ರಬ್ಬರ್ ಹಂಪ್ಸ್, ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿಕೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಚಿತ್ರದುರ್ಗ ನಗರದ ಪ್ರಮುಖ ರಸ್ತೆಯಲ್ಲಿ ಬಸ್ ಸಂಚಾರವನ್ನು ನಿರ್ಬಂಧಿಸಿರುವುದರಿಂದ, ವಯೋವೃದ್ಧರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ರೈತ ಸಂಘಟನೆಗಳು ತಿಳಿಸಿವೆ. ಹೀಗಾಗಿ ಚಳ್ಳಕೆರೆ ಗೇಟ್‍ನಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗೂ ಸಹ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಎರಡು ನಗರ ಸಾರಿಗೆ ಬಸ್ ಕಾರ್ಯಾಚರಣೆ ನಡೆಸುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ತಿಳಿಸಿದ ಅವರು, ಒಂದು ತಿಂಗಳ ಕಾಲ ನಗರದಲ್ಲಿ ನಗರ ಸಾರಿಗೆ ಕಾರ್ಯಾಚರಣೆ ನಡೆಸಿ, ಅದರ ಸಾಧಕ-ಬಾಧಕಗಳ ಕುರಿತು ಚರ್ಚಿಸಿ, ಬಸ್ ಕಾರ್ಯಾಚರಣೆ ಮುಂದುವರಿಕೆ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
20 ವರ್ಷಗಳ ಮೇಲ್ಪಟ್ಟ ಮೈನ್ಸ್ ಲಾರಿಗಳು ಓಡಾಟ ಈಗಾಗಲೇ ನಿರ್ಬಂಧಿಸಲಾಗಿದ್ದು, ಒಂದು ವೇಳೆ ಇಂತಹ ಲಾರಿಗಳು ಸಂಚಾರ ಮಾಡಿದರೆ ಅಂತಹ ವಾಹನಗಳನ್ನು ಸೀಜ್ ಮಾಡಬೇಕು. 20 ವರ್ಷ ಮೇಲ್ಪಟ್ಟ ವಾಹನಗಳ ಓಡಾಟ ಇಲ್ಲದಿರುವ ಬಗ್ಗೆ ದೃಢೀಕರಣ ನೀಡುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ ಅವರು, ರಸ್ತೆ ಮಧ್ಯದಲ್ಲಿ ವಾಹನ ತಪಾಸಣೆ ನಡೆಸುವುದರಿಂದ ವಾಹನಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ಯಾವುದೇ ಕಾರಣಕ್ಕೂ ವಾಹನಗಳನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ವಾಹನ ತಪಾಸಣೆ ನಡೆಸಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ನಾಗರಾಜ್, ಡಿವೈಎಸ್‍ಪಿ ಗಳಾದ ದಿನಕರ್, ಶಿವಕುಮಾರ್, ಸತ್ಯನಾರಾಯಣ ರಾವ್ ನಗರಸಭೆ ಪೌರಾಯುಕ್ತೆ ಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
