ಮುಳಬಾಗಿಲು : ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಗಳನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆ, ತಹಶೀಲ್ದಾರ್ ವಿ ಗೀತಾ ನೇತೃತ್ವದ ತಂಡ ಸೋಮವಾರ ನಗರದಲ್ಲಿನ ಹೋಟೆಲ್ಗಳು ಹಾಗೂ ವಾಣಿಜ್ಯ ಕೇಂದ್ರಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಪರಿಶೀಲನೆ ವೇಳೆ ಕೆಲವು ಹೋಟೆಲ್ಗಳಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ವಾಣಿಜ್ಯ ಅಡುಗೆ ಸಿಲಿಂಡರ್ಗಳನ್ನು ಬಳಸುತ್ತಿರುವುದು ಕಂಡುಬಂತು. ಈ ವೇಳೆ ತಹಶೀಲ್ದಾರ್ ಗೀತಾ, ಯಾವುದೇ ಕಾರಣಕ್ಕೂ ಗೃಹ ಬಳಕೆಯ ಅನಿಲವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ನಗರದ ಅಸ್ಲಾಂ ಪಾಷಾ ಎಂಬುವರು ತಮ್ಮ ಟೀ-ಕಾಫಿ ಅಂಗಡಿಯಲ್ಲಿ ಗೃಹ ಬಳಕೆಯ ಅನಿಲವನ್ನು ಬಳಸುತ್ತಿರುವುದು ಪತ್ತೆಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಾಣಿಜ್ಯ ಮಳಿಗೆಗಳು ಹಾಗೂ ಹೋಟೆಲ್ಗಳು ಸಿಲಿಂಡರ್ಗಳನ್ನು ಅಕ್ರಮವಾಗಿ ಸಂಗ್ರಹಿಸಬಾರದು ಎಂದು ಸೂಚಿಸಿರುವ ಅಧಿಕಾರಿಗಳು, ಅನಿಲ ವಿತರಕರು ಕಾಳಸಂತೆಯಲ್ಲಿ ಅನಿಲ ಮಾರಾಟ ಮಾಡುವುದನ್ನು ತಡೆಯಲು ಎಚ್ಚರಿಕೆ ನೀಡಿದರು. ಅಕ್ರಮಗಳು ಪತ್ತೆಯಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ನಿಗದಿತ ದರದಲ್ಲಿ ಮಾತ್ರ ಅನಿಲ ಸಿಲಿಂಡರ್ಗಳನ್ನು ಮಾರಾಟ ಮಾಡಬೇಕು. ನಿಗದಿತ ದರಕ್ಕಿಂತ ಹೆಚ್ಚು ದರಕ್ಕೆ ಮಾರಾಟ ಮಾಡಿದಲ್ಲಿ ಸಂಬಂಧಿತ ಏಜೆನ್ಸಿಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದರು.ಇದೇ ವೇಳೆ ಆಸ್ಪತ್ರೆಗಳು, ವಸತಿ ನಿಲಯಗಳು ಹಾಗೂ ಶಾಲೆಗಳಿಗೆ ಅಡುಗೆ ಅನಿಲ ಕೊರತೆ ಉಂಟಾಗದಂತೆ ಸರಬರಾಜು ಖಚಿತಪಡಿಸಿಕೊಳ್ಳಲು ವಿತರಕರಿಗೆ ಸೂಚನೆ ನೀಡಲಾಗಿದೆ.
ದಾಳಿಯ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಅರ್ಷದ್ ಅಲಿ, ಶಿರಸ್ತೇದಾರ್ ಸುಬ್ರಮಣಿ, ಕಂದಾಯ ಅಧಿಕಾರಿ ಸಾದತ್ ಉಲ್ಲಾ ಹಾಗೂ ಅಶ್ವಥ್ ಗೌಡ ಉಪಸ್ಥಿತರಿದ್ದರು.

















