ಬೆಂಗಳೂರು: ಇಂದು ಕರ್ನಾಟಕ ವಿಧಾನ ಪರಿಷತ್ ಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಈ ಕಾರ್ಯಕ್ರಮ ನಡೆದಿದೆ. ಬಸವರಾಜ್ ಹೊರಟ್ಟಿ ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.
ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿಟಿ ರವಿ ಕೇಸರಿ ಶಾಲು ಧರಿಸಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಬಿಜೆಪಿ ನಾಯಕರು ಶಿಳ್ಳೆ ಹೊಡೆದು, ಚಪ್ಪಾಳೆ ನೀಡಿ ಅಭಿನಂದನೆಯನ್ನು ತಿಳಿಸಿದರು. ಪ್ರಮಾಣ ವಚನ ಸ್ವೀಕಾರದ ಬಳಿಕ ಸಿಟಿ ರವಿ ನೇರವಾಗಿ ಬಂದು ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದಿದ್ದಾರೆ. ನಮಸ್ಕಾರ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಸಿದ್ದರಾಮಯ್ಯ ಅವರು ಕೂಡ ಸಿಟಿ ರವಿ ಅವರ ಕಿವಿ ಹಿಡಿದು, ಆಶೀರ್ವಾದ ಮಾಡಿದ್ದಾರೆ.
ಬಳಿಕ ಭಾರತ ಮಾತೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಎನ್. ರವಿಕುಮಾರ್ ಅವರು ಕೂಡ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಜೆಡಿಎಸ್ ಸದಸ್ಯ ಬೋಜೇಗೌಡ ಸಿದ್ದರಾಮಯ್ಯ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರು ಕೂಡ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ತಂದೆಯವರ ಆಶೀರ್ವಾದ ಪಡೆದಿದ್ದಾರೆ. ವಿಧಾನಸಭೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ 17 ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.