ಉಡುಪಿ: ಹೆಣ್ಣು ಮಕ್ಕಳು ಮದುವೆ ವಯಸ್ಸು 18 ಇದ್ದದ್ದನ್ನ ಕೇಂದ್ರ ಸರ್ಕಾರ ಈಗ 21ಕ್ಕೆ ಏರಿಕೆ ಮಾಡಿದೆ. ಈ ಸಂಬಂಧ ಸ್ವರ್ಣವಲ್ಲಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನ ಮರುಪರಿಶೀಲನೆ ಮಾಡಬೇಕೆಂದು ಒತ್ತಾಯ ಹಾಕಿದ್ದಾರೆ.
ಕೃಷ್ಣಮಠದ ವಿಶ್ವಾರ್ಪಣಂ ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗಿದ್ದ ಸ್ವರ್ಣವಲ್ಲಿ ಸ್ವಾಮೀಜಿ, ಕೇಂದ್ರ ಸರ್ಕಾರದ ಈ ನಿರ್ಣಯ ಹಿಂದೂಗಳಿಗೆ ಮಾರಕ. ಮಾಡುವುದಾದರೇ ಎಲ್ಲರಿಗೂ ಅನ್ವಯವಾಗುವಂತ ಕಾನೂನು ಮಾಡಿ. ಮದುವೆ ವಿಚಾರದಲ್ಲಿ ಮುಸ್ಲಿಂ, ಕ್ರೈಸ್ತರಿಗೆ ಬೇರೆ ರೀತಿಯಾದ ಕಾನೂನು ಇದೆ. ನೀವೂ ಮಾಡುತ್ತಿರುವ ಕಾನೂನು ಕೇವಲ ಹಿಂದೂಗಳಿಗೆ ಅನ್ವಯವಾಗುವಂಥದ್ದು ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಮುಸ್ಲಿಂರ ಕಾನೂನು ಪ್ರಕಾರ ಈಗಲೂ ಅವರ ಮದುವೆ ವಯಸ್ಸು 15 ಇದೆ. ಹೀಗಾಗಿ ಅವರ ಜನಸಂಖ್ಯೆ ಬೆಳೆಯುತ್ತಾ ಹೋಗುತ್ತದೆ. ಆದ್ರೆ ಹಿಂದೂಗಳ ಸಂಖ್ಯೆ ಈಗಲೇ ಕಡಿಮೆ ಇದೆ. ಈ ರೀತಿ ಕಾನೂನು ತರುವುದರಿಂದ ಇನ್ನು ಕಡಿಮೆಯಾಗುತ್ತ ಹೋಗುತ್ತದೆ. ರಾಷ್ಟ್ರ ಮಟ್ಟದಲ್ಲಿ ಸಂತರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.