ಚಿತ್ರದುರ್ಗ,(ಏ.20) : ಪರ್ಸೆಂಟೇಜ್ ಸರ್ಕಾರ ಎಂದು ಹೇಳಿಕೆ ನೀಡಿದ ದಿಂಗಾಲೇಶ್ವರ ಶ್ರೀಗಳ ವಿರುದ್ಧ ಹಿಂದುಳಿದ ಹಾಗೂ ದಲಿತ ಮಠಾಧೀಶರ ಒಕ್ಕೂಟದಿಂದ ಇಂದು ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡುವ ಮೂಲಕ ಸರ್ಕಾರದ ಪರ ಬ್ಯಾಟ್ ಬೀಸಿದರು.
ಚಿತ್ರದುರ್ಗದ ಬೋವಿ ಗುರುಪೀಠದಲ್ಲಿ ಮಠಾಧೀಶರು ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಹಾಗೂ ಕಾಗಿನೆಲೆ ಕನಕ ಗುರುಪೀಠದ ಪೀಠಾಧಿಪತಿ ನಿರಂಜನಪುರಿ ಶ್ರೀ ಮಾತನಾಡಿ, ವಿವಾದಕ್ಕೆ ತಾತ್ವಿಕ ಅಂತ್ಯವಾಡಲು ಈ ಸುದ್ದಿಗೋಷ್ಟಿ ನಡೆಸಲಾಗ್ತಿದೆ ಎಂದರು.
ದಿಂಗಾಲೇಶ್ವರ ಶ್ರೀಗಳ ಆರೋಪ ಸತ್ಯಕ್ಕೆ ದೂರವಾದದ್ದು. ಎಲ್ಲ ಸರ್ಕಾರಗಳು ನಮ್ಮ ಮಠಗಳಿಗೆ ಅನುದಾನ ನೀಡಿವೆ. ನೇರವಾಗಿ ಮಠಗಳಿಗೆ ಅನುದಾನ ಎಲ್ಲೂ ಬಿಡುಗಡೆಯಾಗಿಲ್ಲ. ಜಿಲ್ಲಾಧಿಕಾರಿ ಖಾತೆಗೆ ಸರ್ಕಾರದ ಅನುದಾನ ಬಂದ ಬಳಿಕ ಮಠಗಳ ಅಭಿವೃದ್ಧಿ ಆಗಿವೆ. ನಾವು ದಾಖಲೆ ಒದಗಿಸಿದ ಬಳಿಕ ಜಿಲ್ಲಾಧಿಕಾರಿ ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಮಠಾಧೀಶರು ಕಮಿಷನ್ ನೀಡುವ ವಿಚಾರವೇ ಇಲ್ಲಿ ಉದ್ಭವಿಸಲ್ಲ. ನಾವ್ಯಾರು ನಯಾಪೈಸ ಪರ್ಸೇಂಟೇಜ್ ನೀಡಿಲ್ಲ. ನಾವು ಭಿಕ್ಷೆ ಬೇಡಿಯಾದರು ಮಠ ಕಟ್ತೇವೆ. ಕಮೀಷನ್ ಕೊಟ್ಟು ಮಠ ಕಟ್ಟುವ ಅಗತ್ಯ ಇಲ್ಲಿ ಯಾರಿಗೂ ಇಲ್ಲ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಶರಣ ಮಾದರಚನ್ನಯ ಗುರುಪೀಠದ .ಶ್ರೀ ಬಸವಮೂರ್ತಿ ಮಾದರಚನ್ನಯ್ಯಾ ಮಹಾಸ್ವಾಮಿಗಳು ಮಾತನಾಡಿ, ಕರ್ನಾಟಕದ ಮಟ್ಟಿಗೆ ದಲಿತ ಮಠಗಳ ಪರಂಪರೆಯಲ್ಲಿ ದಲಿತ, ಹಿಂದುಳಿದ ಮಠಮಾನ್ಯಗಳು ಕೇವಲ 2-3 ದಶಕಗಳ ಇತ್ತೀಚಿನ ಇತಿಹಾಸ ಹೊಂದಿರುವುದು ನಾಡಿಗೆ ತಿಳಿದ ವಿಚಾರ.
ಅಂತಹ ಸಂದರ್ಭದಲ್ಲಿ ಆರ್ಥಿಕವಾಗಿ, ಸ್ಥಿತಿವಂತ ಸಮುದಾಯಗಳು ಮಠಮಾನ್ಯಗಳ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡ ಸಂದರ್ಭದಲ್ಲಿ ನಿರೀಕ್ಷೆಯಂತೆ ಮುನ್ನಡೆ ಆಗಲಿಲ್ಲ. ಇಂತಹ ಸಂದರ್ಭದಲ್ಲಿ ಶೋಷಿತ ಸಮುದಾಯಗಳು ಮಠಮಾನ್ಯಗಳ ಮೂಲಕ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಂಕಲ್ಪತೊಟ್ಟಿದ್ದರು ಕೂಡ ಆರ್ಥಿಕವಾದ ಬೆಂಬಲ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿರಲಿಲ್ಲ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಶೋಷಿತ ಸಮುದಾಯಗಳ ಆದಿಯಾಗಿ ಎಲ್ಲಾ ಮಠಗಳಿಗೆ ಗೌರವಪೂರ್ವಕವಾಗಿ ಅನುದಾನ ನೀಡಲು ಆರಂಭ ಮಾಡಿದರು ಎಂದು ತಿಳಿಸಿದರು.
ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರೆಗೂ ಮಠಮಾನ್ಯಗಳಿಗೆ ಬಂದಂತಹ ಅನುದಾನ ಸರ್ಕಾರಗಳು ವ್ಯವಸ್ಥಿತವಾಗಿ ಯೋಜನಾ ಬದ್ಧವಾಗಿ ಮತ್ತು ಸರ್ಕಾರದ ನಿಯಮಗಳ ಪ್ರಕಾರವಾಗಿ ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಡುಗಡೆ ಮಾಡಿವೆ. ಈ ಸಂದರ್ಭದಲ್ಲಿ ಸರ್ಕಾರ ಮತ್ತು ಮಠಗಳ ನಡುವೆ ಅಧಿಕಾರಿಗಳ ಸಂಪೂರ್ಣ ಜವಾಬ್ದಾರಿ ಹಾಗೂ ಉಸ್ತುವಾರಿಯಿಂದ ಬಿಡುಗಡೆಯಾಗಿರುವ ಅನುದಾನ ಮಠಗಳ ಅಭಿವೃದ್ಧಿಗೆ ಪೂರಕವಾಗಿವೆ ಎಂಬ ವರದಿಯನ್ನು ಕಾಲಕಾಲಕ್ಕೆ ನೀಡುತ್ತಾ ಬರಲಾಗಿದೆ ಎಂದರು.
ಒಕ್ಕೂಟದ ಗೌರವಾಧ್ಯಕ್ಷರಾದ ಭಗೀರಥ ಗುರುಪೀಠದ ಶ್ರೀ ಪುರಷೋತ್ತಮಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಸರ್ಕಾರ ನೀಡಿರುವ ಅನುದಾನ ಸದ್ಬಳಕೆ ಮಾಡಿಕೊಂಡು ಅನೇಕ ಶೋಷಿತ ಸಮುದಾಯದ ಮಠಗಳು ಶೈಕ್ಷಣಿಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಸಮಾಜವನ್ನು ಮುಖ್ಯವಾಹಿನಿಗೆ ತರುವಂತಹ ನಿಟ್ಟಿನಲ್ಲಿ ಸಂಪೂರ್ಣವಾದ ಅಭಿವೃದ್ಧಿ ಯೋಜನೆಗಳ ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾವೆ.
ಆದರೆ, ಇತ್ತೀಚಿನ ದಿನಗಳಲ್ಲಿ ಅನುದಾನ ಕುರಿತು ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಮುಖ್ಯವಾಗಿ ಉತ್ತರ ಕರ್ನಾಟಕದ ಪ್ರಮುಖ ಸ್ವಾಮೀಜಿಯವರು ನೀಡಿರುವ ಹೇಳಿಕೆಗೆ ಹಿಂದುಳಿದ ದಲಿತ ಮಠಾಧೀಶರು ಪ್ರತಿಕ್ರಿಯೆ ನೀಡಲೇ ಬೇಕಾಗಿದೆ. ಕಾರಣ ಅವರು ಹೇಳಿರುವಂತೆ “ಮಠ ಮಾನ್ಯಗಳಿಗೆ ನೀಡುವ ಅನುದಾನಕ್ಕೆ 30% ಕೊಡಬೇಕೆಂಬ” ವಿಚಾರಕ್ಕೆ ಪ್ರತಿಕ್ರಿಯೆ ನೀಡಬೇಕಾಗಿದೆ. ನಮಗೆ ಇದುವರೆಗೆ ಸರ್ಕಾರ ನೀಡಿರುವ ಅನುದಾನಕ್ಕೆ ಸರ್ಕಾರದ ನಿಯಮಾನುಸಾರ ಇಲಾಖೆ ಮುಖೇನ ಬಿಡುಗಡೆ ಮಾಡಿದೆ. ಪ್ರತಿ ಹಂತದ ಕಾಮಗಾರಿ ಅಭಿವೃದ್ಧಿ ಸಂಬಂಧಿಸಿದ ಇಲಾಖೆಗಳ ಮೂಲಕ ವರದಿ ಪಡೆದು, ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಅಧಿಕಾರಿಗಳು ಅಭಿವೃದ್ಧಿಗೆ ತಕ್ಕಂತೆ ಕಂತಿನ ಮೂಲಕ ಅನುದಾನ ನೀಡಿದ್ದಾರೆ. ಯಾವುದೇ ಅಧಿಕಾರಿಗಳಿಗಾಗಲೀ, ರಾಜಕಾರಣಿಗಾಗಲೀ ಪರ್ಸೇಂಟೇಜ್ ನೀಡಿಲ್ಲ ಎಂದರು.
ಅಧಿಕಾರಿಗಳು, ರಾಜಕಾರಣಿಗಳು ಮಠಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಪರ್ಸೇಂಟೇಜ್ ಬೇಡಿಕೆಯನ್ನು ಯಾರು ಇಟ್ಟಿಲ್ಲ. ಈಗ ಹೇಳಿಕೆ ನೀಡಿರುವ ಮಠಾಧೀಶರ ಹೇಳಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಅನುದಾನಕ್ಕೆ ಅಪಸ್ವರ ಮೂಡುವಂತಹ ಹೇಳಿಕೆಗಳನ್ನು ಯಾವುದೇ ಸ್ವಾಮೀಜಿಗಳು ನೀಡಿದರು ನಾವು ಒಪ್ಪುವುದಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ಧರಾಮಯ್ಯ, ಸದಾನಂದಗೌಡ, ಜಗದೀಶ್ ಶೆಟ್ಟರು ಮತ್ತು ಪ್ರಸ್ತುತದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಎಲ್ಲರೂ ಸಮಾನವಾಗಿ ಎಲ್ಲಾ ಮಠಗಳ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ.ಒಟ್ಟಾರೆ ಹಿಂದುಳಿದ ದಲಿತ ಮಠಗಳಿಗೆ ಅನುದಾನ ಬಿಡುಗಡೆ ಮಾಡಿರುವುದು ಸಹಿಸಿಕೊಳ್ಳದ ಮನಸ್ಸುಗಳ ಮಾತು ಪೊಳ್ಳಾಗಿದೆ.ಅನುದಾನ ಬಿಡುಗಡೆ ಮಾಡಿದ ದಿನ ಕೆಲ ಮಠಾಧೀಶರರು ಲಿಂಗಾಯತ ಮಠಕ್ಕೆ ಅನುದಾನ ಬಿಡುಗಡೆ ಮಾಡಿಲ್ಲವೆಂದು ಜನತೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.
ಒಕ್ಕೂಟದ ಉಪಧ್ಯಾಕ್ಷರಾದ ತೀರ್ಥಹಳ್ಳಿಯ ಶ್ರೀ ನಾರಾಯಣ ಗುರು ಮಹಾಸಂಸ್ಥಾನ, ಶ್ರೀ ಆರ್ಯರೇಣುಕಾನಂದ ಮಹಾಸ್ವಾಮಿಗಳುಕಾರ್ಯದರ್ಶಿ ಶ್ರೀ ಜಗದ್ಗುರುಕುಂಚಿಟಿಗ ಮಹಾಸಂಸ್ಥಾನ ಮಠ, ಶ್ರೀ ಶಾಂತವೀರ ಮಹಾಸ್ವಾಮಿಗಳುಹೊಸದುರ್ಗ ಸಹಕಾರ್ಯದರ್ಶಿಮಡಿವಾಳ ಗುರುಪೀಠ, ಶ್ರೀ ಬಸವ ಮಾಚೀದೇವ ಮಹಾಸ್ವಾಮಿಗಳು ಶ್ರೀ ಮಚೀದೇವಾ ಮಹಾಸಂಸ್ಥಾನ ಮಠ, ಚಿತ್ರದುರ್ಗ ಸಂಚಾಲಕರಾದ ಭೋವಿ ಗುರುಪೀಠ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳುಜಗದ್ಗುರು ಶ್ರೀ ಸಿದ್ಧರಾಮೇಶ್ವರ ಮಹಾಸಂಸ್ಥಾನ ಮಠ, ಚಿತ್ರದುರ್ಗ ಹಾಗೂ ಬಾಗಲಕೋಟಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಗಾಣಿಗರ ಗುರುಪೀಠ, ಶ್ರೀ ಡಾ.ಬಸವಕುಮಾರ ಮಹಾಸ್ವಾಮಿಗಳುಚಿತ್ರದುರ್ಗ.ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ, ಹಾವೇರಿ.ಶ್ರೀ ಬಸವ ಕುಂಬಾರಗುಂಡಯ್ಯಾ ಮಹಾಸ್ವಾಮಿಗಳುಶ್ರೀ ಕುಂಬಾರ ಗುಂಡಯ್ಯ ಗುರುಪೀಠ, ತೆಲಸಂಗ.ಶ್ರೀ ಅನ್ನಧಾನಿ ಭಾರತೀಅಪ್ಪಣ್ಣ ಮಹಾಸ್ವಾಮಿಗಳುಶ್ರೀ ಹಡಪದಗುರುಪೀಠ, ತಂಗಡಗಿ-ಮುದ್ದೇಬಿಹಾಳಶ್ರೀ ಬಸವ ಬೃಂಗೇಶ್ವರ ಸ್ವಾಮೀಜಿ ಹೆಳವ ಗುರುಪೀಠ, ಗುಬ್ಬಿ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ ಮೇದಾರ ಗುರುಪೀಠ, ಇವರು ಭಾಗವಹಿಸಿದ್ದರು.