ಚಿತ್ರದುರ್ಗ : ಹೊಸದುರ್ಗ ಪುರಸಭೆಗೆ 2021ನೇ ಸಾಲಿನ ಅದ್ಭುತ ಪ್ರಶಸ್ತಿಯೊಂದು ಲಭಿಸಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯದ ಸಫಾಯ್ ಮಿತ್ರ ಚ್ಯಾಲೆಂಜ್ ಸ್ಪರ್ಧೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪುರಸಭೆಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯ ಗರಿ ಜಿಲ್ಲೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ಮೈಸೂರು, ಬೃಹತ್ ಬೆಂಗಳೂರು, ಕೃಷ್ಣರಾಜಸಾಗರ, ಕುಮುಟ, ಪಿರಿಯಾಪಟ್ಟಣ, ಉಡುಪಿ, ಕೋಲಾರ ಹಾಗೂ ಹೊಸದುರ್ಗ ಸೇರಿದಂತೆ ರಾಜ್ಯದ 8 ನಗರಗಳು ಸ್ಪರ್ಧೆ ನಡೆಸಿದ್ದವು. ಅದರಲ್ಲಿ ಹೊಸದುರ್ಗಕ್ಕೂ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಲಭಿಸಿದೆ.
ಕಸಮುಕ್ತ ನಗರ ಎಂಬ ಹೆಮ್ಮೆಗೆ ಹೆಸರಾಗಿರುವ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಹೊಸದುರ್ಗ ಪುರಸಭೆಗೆ ಅಧಿಕಾರಿಗಳು, ಪುರಸಭೆ ಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಇದೇ ತಿಂಗಳ ನವೆಂಬರ್ 20 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಲಿರುವ ಸ್ವಚ್ಛ ಸರ್ವೇಕ್ಷಣ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸ್ವಚ್ಚ ಸರ್ವೇಕ್ಷಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ, ಇಂಜಿನಿಯರ್ ಜಿವಿ ತಿಮ್ಮರಾಜು ಹಾಗೂ ಅಧ್ಯಕ್ಷ ಶ್ರೀನಿವಾಸನ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಶಸ್ತಿ ಸಿಕ್ಕ ಸಂತೋಷವನ್ನ ಸಚಿವ ಶ್ರೀರಾಮುಲು ಕೂಡ ವ್ಯಕ್ತಪಡಿಸಿದ್ದು, ಈ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪುರಸಭೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಪ್ರಶಸ್ತಿಗೆ ಆಯ್ಕೆಯಾಗಲು ಶ್ರಮಿಸಿದ ಸರ್ವರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ತನ್ನ ಟ್ವಿಟ್ಟರ್ ಖಾತೆಯಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇನ್ನೂ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ ಶೇಖರ್ ಕೂಡ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಲಭಿಸಲು ಸಹಕರಿಸಿದ ನಗರದ ನಾಗರಿಕರು, ಅಧಿಕಾರಿಗಳು, ಪುರಸಭಾ ಕಾರ್ಮಿಕರಿಗೆ ಹಾಗೂ ಮಾರ್ಗದರ್ಶನ ನೀಡಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗನ್ನು ಅಭಿನಂದಿಸಿದ್ದಾರೆ.
ಪ್ರಶಸ್ತಿ ಬಂದಿರುವುದಕ್ಕೆ ಜಿಲ್ಲಾಧಿಕಾರಿ ಕವಿತ ಎಸ್ ಮಣ್ಣಿಕೇರಿ ಸೇರಿದಂತೆ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.