ಹುಬ್ಬಳ್ಳಿ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಜಿ.ಟಿ ದೇವೇಗೌಡರ ನೇತೃತ್ವದ ಕೋರ್ ಕಮಿಟಿಯಲ್ಲಿ ಈ ಸಂಬಂಧ ನಿರ್ಧಾರವಾಗಿದ್ದು, ಅಮಾನತು ಮಾಡಲಾಗಿದೆ.

ಈ ಸಂಬಂಧ ಹುಬ್ಬಳ್ಳಿಯ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, ಪ್ರಕರಣದ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬಕ್ಕೆ ಕಳಂಕ ತರುವಂತೆ ಮಾಡಬೇಕೆಂಬ ಹುನ್ನಾರವಿದೆ. ಹಳೆಯ ಪ್ರಕರಣವನ್ನು ಈಗ ಚುನಾವಣಾ ಸಮಯದಲ್ಲಿ ಮುನ್ನೆಲೆಗೆ ತಂದಿದ್ದಾರೆ. ಈ ಪ್ರಕರಣಕ್ಕೂ, ಮೋದಿ ಅವರಿಗೂ ಕಾಂಗ್ರೆಸ್ ನವರು ತಳುಕು ಹಾಕಿದ್ದಾರೆ. ಅದಕ್ಕೂ ಮೋದಿಗೂ ಏನು ಸಂಬಂಧ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಮೈತ್ರಿಗೆ ಸೋಲು ತರಬೇಕೆಂದು ಈ ಕುತಂತ್ರ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಬಹಿರಂಗ ಮಾಡುವಾಗ ಆ ಮಹಿಳೆಯರ ಮೂಖವನ್ನಾದರೂ ಬ್ಲರ್ ಮಾಡಿಲ್ಲ. ಎರಡು ಸಾವಿರ ವಿಡಿಯೋ ಇದೆ ಅಂತೀರಿ. ಇದೆಲ್ಲಾ ಯಾವ ಫ್ಯಾಕ್ಟರಿಯಲ್ಲಿ ಸಿದ್ಧವಾಯ್ತು. ಸಂತ್ರಸ್ತೆಯರ ವಿವರ ಬಹಿರಂಗ ಮಾಡಿ ನಾಳೆ ಅವರಿಗೇನಾದರೂ ಹಡಚ್ಚು ಕಡಿಮೆಯಾದರೆ ಅದಕ್ಕೆ ನಾಳೆ ಯಾರೂ ಹೊಣೆ. ಅವರೇನಾದರೂ ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆಗಾರರಾಗುತ್ತಾರೆ ಸಿದ್ದರಾಮಯ್ಯನವರೇ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಜಿ ಟಿ ದೇವೇಗೌಡ, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಸ್ವಾಗತವಿದೆ. ಅದಕ್ಕೆ ವಿರುದ್ಧ ಹೇಳಿಕೆ ಕೊಡುವುದಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ಕೊಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮನಾತುಗೊಳಿಸಲು ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.

