ಅನೂರ್ಜಿತ ಬೆಳೆ ಕಟಾವು ಮಾಡಿದರೆ ಅಧಿಕಾರಿಗಳ ಅಮಾನತು : ಜಿಲ್ಲಾಧಿಕಾರಿ ಟಿ.ವೆಂಕಟೇಶ್

3 Min Read

ಚಿತ್ರದುರ್ಗ. ನ.28: ಬೆಳೆ ಕಟಾವು ಪ್ರಯೋಗ ನಡೆಸಿ, ಉದ್ದೇಶ ಪೂರ್ವಕವಾಗಿ ತಪ್ಪು ದತ್ತಾಂಶವನ್ನು ತಂತ್ರಾಂಶದಲ್ಲಿ ನಮೂದು ಮಾಡಿರುವುದು ಕಂಡು ಬಂದರೆ, ಸಂಬಂದಿಸಿದ ಅಧಿಕಾರಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರವಾರ ಜರುಗಿದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಅಂಕಿ-ಅಂಶಗಳ ಎರಡನೆ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

ಕಳೆದ ಬಾರಿ ಸರಿಯಾದ ಸಮಯಕ್ಕೆ ಕಟಾವು ಪ್ರಯೋಗ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದರ ಪರಿಣಾಮ, ರೈತರು ಸಮಸ್ಯೆ ಅನುಭವಿಸುವಂತಾಯಿತು.  ಈ ಬಾರಿಯ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳು ನಿಗದಿತ ಸಮಯದಲ್ಲಿಯೇ ಪೂರ್ಣಗೊಳಿಸಬೇಕು. ಒಂದು ವೇಳೆ ಬೆಳೆ ಕಟಾವು ಪ್ರಯೋಗ ತಪ್ಪಿ ಹೋಗಿ, ರೈತರಿಗೆ ವಿಮೆ ಬರುವಲ್ಲಿ ತೊಂದರೆಯಾದರೆ, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತುಗೊಳಿಸಿ, ಅವರ ವೇತನದಿಂದಲೇ ವಿಮೆ ಮೊತ್ತ ಭರಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕೆಟೇಶ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ಅಧಿಕಾರಿಗಳು  ಬೆಳೆ ಕಟಾವು ಪ್ರಯೋಗಕ್ಕೆ ನಿಗದಿ ಪಡಿಸಿದ ಬೆಳೆ ಬಿತ್ತನೆಯಾಗಿಲ್ಲ ಎಂದು ಕಚೇರಿಯಲ್ಲಿಯೇ ಕೂತು ವರದಿ ನೀಡಬಾರದು. ಸ್ಥಳಕ್ಕೆ ಹೋಗಿ ವೀಕ್ಷಣೆ ನಡೆಸಬೇಕು. ಪರ್ಯಾಯ ಜಮೀನುಗಳಲ್ಲಿ ನಿಗದಿ ಪಡಿಸಿದ ಬೆಳೆ ಇದ್ದರೆ, ಅನುಮತಿ ಪಡೆದು ಬೆಳ ಕಟಾವು ಪ್ರಯೋಗ ನಡೆಸಬೇಕು. ಈ ಕುರಿತು  ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಡೆಸಬೇಕು. ಬೆಳೆ ಬಿತ್ತನೆಯಾಗಿಲ್ಲ ಎಂದು ಒಂದು ವೇಳೆ ತಪ್ಪಾಗಿ ವರದಿ ನೀಡಿದರೆ, ಅಂತಹ ಅಧಿಕಾರಿಯ ವಿರುದ್ದ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.

 

ಅನೂರ್ಜಿತ ಬೆಳೆ ಕಟಾವು ಅಧಿಕಾರಿಗಳ ಅಮಾನತು:
ಸರಿಯಾದ ಸಮಯಕ್ಕೆ ಬೆಳೆ ಕಟಾವು ಪ್ರಯೋಗ ಕೈಗೊಳ್ಳದೇ, ಬೆಳೆ ಕೊಯ್ಲು ಮುಗಿದ ನಂತರ ಅದೇ ಜಮೀನನಲ್ಲಿ ಕೃತಕವಾಗಿ ಕಟಾವು ಪರೀಕ್ಷೆ ನಡೆಸಿ, ಪ್ರಯೋಗ ಅನೂರ್ಜಿತಗೊಳಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ, ಹಿರಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ನಿರ್ದೇಶನ ನೀಡಿದರು. ಇದರೊಂದಿಗೆ ಅಂತಹ ಎಲ್ಲಾ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಿದ ಅಧಿಕಾರಿಗಳಿಂದ ವಿವರಣೆ ಪಡೆದುಕೊಳ್ಳಬೇಕು, ತಹಶೀಲ್ದಾರರು ತಾಲ್ಲೂಕು ಮಟ್ಟದ ಸಮನ್ವಯ ಸಮತಿ ಸಭೆಗಳನ್ನು ನಡೆಸುವಂತೆ ಸೂಚಿಸಿದರು.

2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಒಟ್ಟು 4,166 ಬೆಳೆ ಕಟಾವು ಪ್ರಯೋಗಗಳನ್ನು ನಿಗದಿ ಪಡಿಸಲಾಗಿದೆ. ಇದರಲ್ಲಿ 4,018 ಪ್ರಯೋಗಳನ್ನು ನಡೆಸಿ ನಮೂನೆ-1 ಭರ್ತಿ ಮಾಡಲಾಗಿದೆ. 148 ಪ್ರಯೋಗಳು ನಿಯೋಜಿಸಿದ ಅಧಿಕಾರಿಗಳು ಕೈಗೊಂಡಿಲ್ಲ. ನಮೂನೆ-2 ರಲ್ಲಿ 3,512 ಪ್ರಯೋಗಳನ್ನು ನಡೆಸಲಾಗಿದೆ. 506 ಪ್ರಯೋಗಳು ಬಾಕಿಯಿವೆ. 108 ಕಂದಾಯ, 10 ಕೃಷಿ, 28 ತೋಟಗಾರಿಕೆ ಹಾಗೂ 02 ಗ್ರಾಮೀಣಾಭಿವೃದ್ದಿ ಇಲಾಖೆಗೆ ಸಂಬಂಧಿಸಿದ ಬೆಳೆ ಕಟಾವು ಪ್ರಯೋಗದ ನಮೂನೆ-1 ಬಾಕಿ ಇವೆ. ಹಿಂಗಾರು ಹಂಗಾಮಿಗೆ 1,190 ಬೆಳ ಕಟಾವು ಪ್ರಯೋಗಳು ಜಿಲ್ಲೆಗೆ ನಿಗಿದಿಯಾಗಿದ್ದು, ಇವುಗಳನ್ನು ಇಲಾಖೆವಾರು ಹಂಚಿಕೆ ಮಾಡಿರುವುದಾಗಿ ಜಿಲ್ಲಾ ಅಂಕಿ-ಸಂಖ್ಯೆ ಸಂಗ್ರಹಣಾಧಿಕಾರಿ  ರವಿಕುಮಾರ್.ಎನ್. ಸಭೆಯಲ್ಲಿ ಮಾಹಿತಿ ನೀಡಿದರು.

ಕೃಷಿ ಗಣತಿ ಪೂರ್ಣಕ್ಕೆ ನ.30 ಕಡೆಯ ದಿನ :
ಕೇಂದ್ರ ಪುರಸ್ಕøತ 11ನೇ ಕೃಷಿ ಗಣತಿಯ ಎರಡನೇ ಹಂತದ ಸರ್ವೇ ಕಾರ್ಯ ಪೂರ್ಣಗೊಳಿಸಲು ನ.30 ಕಡೆಯ ದಿನವಾಗಿದೆ. ಹಿಡುವಳಿ ಗುಣ-ಲಕ್ಷಣ, ಬೆಳೆ ಪದ್ದತಿ, ನೀರಾವರಿ ವಸ್ತುಸ್ಥಿತಿ ಸೇರಿದಂತೆ ಇತರೆ ಅಗತ್ಯ ದತ್ತಾಂಶಗಳನ್ನು ಸಂಗ್ರಹಿಸಲು ಜಿಲ್ಲೆಯಲ್ಲಿ 206 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 55 ಗ್ರಾಮಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದೆ. 155 ಗ್ರಾಮಗಳ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ನ.30ರ ಒಳಗೆ ಸರ್ವೇ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕ ಶಿವಕುಮಾರ್, ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಅಶ್ವತ್ಥಾಮ, ವೀಣಾ, ಚಂದ್ರಪ್ಪ, ಸಹಾಯಕ ನಿರ್ದೇಶಕರುಗಳಾದ ಶಶಿರೇಖಾ, ಯಾಸಿನ್ ಸೇರಿದಂತೆ ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *