ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.22 : ಸಂಸತ್‍ನಲ್ಲಿ ವಿರೋಧ ಪಕ್ಷದ 141 ಸಂಸದರನ್ನು ಅಮಾನತ್ತು ಗೊಳಿಸಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ವಿರುದ್ದ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ನಡೆದ ಪ್ರತಿಭಟನೆ ಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹೆಚ್.ಆಂಜನೇಯ ಪಾರ್ಲಿಮೆಂಟ್ ಎಂದರೆ ಪ್ರಜೆಗಳ ಪವಿತ್ರ ಮಂದಿರವಿದ್ದಂತೆ. ಸಂಸದ ಪ್ರತಾಪ್‍ಸಿಂಹರಿಂದ ಪಾಸ್ ಪಡೆದು ಸಂಸತ್ ಒಳಗೆ ನುಗ್ಗಿದವರು ಹೊಗೆ ಬಾಂಬ್ ಸಿಡಿಸಿರುವುದನ್ನು ನೋಡಿದರೆ ಪ್ರಧಾನಿ ಮೋದಿಯವರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಧರ್ಮ ಧರ್ಮಗಳ ನಡುವೆ ಸಂಘರ್ಷವಿಟ್ಟು ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ.ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದಂತಾಗಿದೆ. ಗರೀಭಿ ಹಠಾವೋ ಜಾರಿಗೆ ತಂದಿದ್ದು, ಕಾಂಗ್ರೆಸ್ ಸರ್ಕಾರ. ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಪ್ರಧಾನಿ ಮೋದಿ ಅದಾನಿ, ಅಂಬಾನಿ ಪರವಾಗಿದ್ದಾರೆ. ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಬಿಜೆಪಿ.ಯಲ್ಲಿ ಹಗರಣವಾಗಿಲ್ಲವೆ? ಎಂದು ಪ್ರಶ್ನಿಸಿದ ಹೆಚ್.ಆಂಜನೇಯ ದೇಶದಲ್ಲಿ ಅಮಾಯಕರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಸಂಸತ್‍ನಲ್ಲಿ ಭದ್ರತಾ ಲೋಪವಾಗಿರುವುದನ್ನು ವಿರೋಧಿಸಿ ನ್ಯಾಯ ಕೇಳಿದ ಸಂಸದರುಗಳನ್ನು ಹೊರಗಟ್ಟುವ ಕೆಲಸ ಮಾಡಿದೆ. ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಮೋದಿ ಇದುವರೆವಿಗೂ ಇಪ್ಪತ್ತು ಕೋಟಿ ಯುವಕರಿಗೆ ಉದ್ಯೋಗ ನೀಡಬೇಕಿತ್ತು. ಸಂಸದ ಪ್ರತಾಪಸಿಂಹ ಶಿಫಾರಸ್ಸು ಪತ್ರ ಪಡೆದು ಒಳಗೆ ಹೋದ ನಿರುದ್ಯೋಗಿ ಯುವಕರು ಮೋದಿ ವಿರುದ್ದ ಧಿಕ್ಕಾರಗಳನ್ನು ಕೂಗಿದ್ದಾರೆ. ಕಾನೂನು ರೂಪಿಸುವ ಸಂಸತ್‍ಗೆ ರಕ್ಷಣೆ ಕೊಡಲಾಗದೆ ಪ್ರಧಾನಿ ಮೋದಿಯಿಂದ ದೇಶದ ಜನಸಾಮಾನ್ಯರಿಗೆ ಯಾವ ರೀತಿ ರಕ್ಷಣೆ ನೀಡಬಲ್ಲರು ಎನ್ನುವುದನ್ನು ದೇಶದ ಜನ ಎದುರು ನೋಡುತ್ತಿದ್ದಾರೆಂದರು.
ಬಡವರಿಗೆ, ಕೃಷಿಕರಿಗೆ, ರೈತರಿಗೆ, ಕಾರ್ಮಿಕರಿಗೆ ಕೇಂದ್ರ ಸರ್ಕಾರ ಮೋಸ ಮಾಡುತ್ತಿದೆ. ಕಳೆದ ಚುನಾವಣೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ಹೆಸರೇಳಿಕೊಂಡು ಮೋದಿ ಎರಡನೆ ಬಾರಿಗೆ ದೇಶದ ಪ್ರಧಾನಿಯಾದರು. 141 ಸಂಸದರ ಅಮಾನತ್ತು ಹಿಂದಕ್ಕೆ ಪಡೆದು ದೇಶದ ಜನರ ಕ್ಷಮೆ ಕೇಳಬೇಕು ಎಂದು ಬಿ.ಎನ್.ಚಂದ್ರಪ್ಪ ಒತ್ತಾಯಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡುತ್ತ ಪ್ರಧಾನಿ ನಡವಳಿಕೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ನಾಟಕೀಯ ಬೆಳವಣಿಗೆಯ ಹಿಂದಿರುವ ಪರದೆಯನ್ನು ದೇಶದ ಜನ ಅರ್ಥಮಾಡಿಕೊಳ್ಳಬೇಕು. ಕಳೆದ 16 ರಂದು ಸಂಸತ್‍ನೊಳಗೆ ಮೂವರು ಯುವಕರು ಅನಾಮದೇಯವಾಗಿ ಪ್ರವೇಶಿಸಿದ್ದನ್ನು ದೇಶದ ಜನ ನೋಡಿದ್ದಾರೆ. ಪ್ರವೇಶಿಸಿದವರ ಕೈಯಲ್ಲಿ ಹೊಗೆ ಬಾಂಬ್ ಬಿಟ್ಟರೆ ಯಾವುದೇ ಆಯುಧವಿರಲಿಲ್ಲ. ಮೋದಿ ಪ್ರಧಾನಿಯಾಗಿ ಹತ್ತು ವರ್ಷವಾಯಿತು. ಒಂದು ಉದ್ಯೋಗವು ಸೃಷ್ಠಿಯಾಗಿಲ್ಲ. ಪದವೀಧರ ನಿರುದ್ಯೋಗಿಗಳು ಸಂಸತ್‍ನಲ್ಲಿ ನುಗ್ಗಿ ಪ್ರಧಾನಿ ಮೋದಿ ವಿರುದ್ದ ಧಿಕ್ಕಾರಗಳನ್ನು ಕೂಗಿರುವುದು ದೇಶದ್ರೋಹದ ಕೆಲಸವಲ್ಲ ಎಂದು ಪ್ರಶ್ನಿಸಿದ ಸಂಸದರನ್ನು ಅಮಾನತ್ತುಗೊಳಿಸಿರುವುದು ಯಾವ ನ್ಯಾಯ? ಕರ್ನಾಟಕದ ಒಂದು ವರ್ಷದ ಬಜೆಟ್ ಕೇವಲ ಎರಡು ಲಕ್ಷ ಕೋಟಿ. ಅದಾನಿ, ಅಂಬಾನಿ ಆದಾಯ ಹತ್ತು ಲಕ್ಷ ಕೋಟಿ. ದೇಶದ ಸಂಪತ್ತೆಲ್ಲಾ ಕೊಳ್ಳೆ ಹೊಡೆದಿದ್ದಾರೆ. ಇದನ್ನು ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲದಂತಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಸಂಪತ್‍ಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಕಿಸಾನ್‍ಸೆಲ್ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಪ್ಪ, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿಗೌಡ, ಕೆ.ಪಿ.ಸಿ.ಸಿ. ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾದ ಮುನಿರಾ ಮಕಾಂದಾರ್, ಮೋಕ್ಷರುದ್ರಸ್ವಾಮಿ, ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ, ಭಾಗ್ಯಮ್ಮ, ಸೇವಾದಳದ ಇಂದಿರಾ, ರೇಣುಕ, ಮೆಹಬೂಬ್‍ಖಾತೂನ್, ಸೈಯದ್ ಖುದ್ದೂಸ್, ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್ ನವಾಜ್, ಚಾಂದ್‍ಪೀರ್, ಶಬ್ಬೀರ್‍ಭಾಷ, ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಸಹೋದರ ನಾಗರಾಜ್, ಗಂಜಿಗಟ್ಟೆ ಶಿವಣ್ಣ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.