ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ಆ.12) : ತಾಲ್ಲೂಕಿನ ಹೊಸಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನಿಂದ ಸಾರ್ವಜನಿಕ ಅಸ್ವಸ್ಥರಾಗಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಅವರು ಶನಿವಾರದಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದು, ಇಲ್ಲಿನ ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಹೊಸಹಟ್ಟಿ ಗ್ರಾಮದಲ್ಲಿ ಕಳೆದ ಆಗಸ್ಟ್ 05 ರಿಂದಲೂ ಕೆಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದು, ಪೈಪ್ಲೈನ್ ಸೋರಿಕೆಯಿಂದಾಗಿ ಈ ರೀತಿಯಾಗಿದೆ ಎಂಬ ಸಂಶಯ ಬಂದ ಹಿನ್ನೆಲೆಯಲ್ಲಿ ಈಗಾಗಲೆ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದ ನೀರಿನ ಮೂಲವನ್ನು ಕಡಿತಗೊಳಿಸಿ, ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಕುರಿತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಅವರು ಶನಿವಾರ ಗ್ರಾಮಕ್ಕೆ ಖುದ್ದು ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು.
ಹೊಸಹಟ್ಟಿಯಲ್ಲಿ ಜನರು ಕುಡಿಯುವ ನೀರಿನಿಂದ ಅಸ್ವಸ್ಥಗೊಂಡ ಶಂಕೆ : ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಗ್ರಾಮ ಭೇಟಿ. pic.twitter.com/3JirkmbRxx
— suddione-kannada News (@suddione) August 12, 2023
ಗ್ರಾಮದ ವಿವಿಧೆಡೆ ತೆರಳಿ ಮಾಹಿತಿ ಪಡೆದುಕೊಂಡ ಅವರು, ಯಾರೂ ಕೂಡ ಆತಂಕ್ಕೆ ಒಳಗಾಗದಂತೆ ಧೈರ್ಯ ತುಂಬಿದರು. ಮುಂಜಾಗ್ರತಾ ಕ್ರಮವಾಗಿ ಈಗಾಗಲೆ ಗ್ರಾಮದ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದ್ದು, ಜನರ ಆರೋಗ್ಯ ತಪಾಸಣೆ, ಚಿಕಿತ್ಸೆಗಾಗಿ ಶುಶ್ರೂಷಕರು, ವೈದ್ಯರನ್ನು ನಿಯೋಜಿಸಲಾಗಿದೆ, ಅಲ್ಲದೆ ಆ್ಯಂಬುಲೆನ್ಸ್ ಕೂಡ ವ್ಯವಸ್ಥೆಗೊಳಿಸಲಾಗಿದೆ.
ಗ್ರಾಮದಲ್ಲಿ ಜನರಿಗೆ ಸ್ವಚ್ಛತೆ, ನೈರ್ಮಲ್ಯ ಹಾಗೂ ವೈಯಕ್ತಿಕ ಸ್ವಚ್ಛತೆ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಕರಪತ್ರವನ್ನು ಕೂಡ ಹಂಚಲಾಗುತ್ತಿದೆ. ಸಾರ್ವಜನಿಕರು ಕಾಯಿಸಿ ಆರಿಸಿದ ನೀರನ್ನು ಕುಡಿಯಲು ಉಪಯೋಗಿಸಬೇಕು, ಹಾಗೂ ಆಹಾರ ಸೇವನೆಗೂ ಮುನ್ನ ಸಾಬೂನಿನಿಂದ ಸ್ವಚ್ಛವಾಗಿ ಕೈ-ಕಾಲು ತೊಳೆದುಕೊಂಡು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಪಂ. ಸಿಇಒ ಸೋಮಶೇಖರ್ ಅವರು ಮನವಿ ಮಾಡಿದ್ದಾರೆ.
ಗ್ರಾಮಕ್ಕೆ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಗಿರೀಶ್ ಅವರು ಭೇಟಿ ನೀಡಿ, ಸಾರ್ವಜನಿಕರ ಆರೋಗ್ಯ, ಹಾಗೂ ಪರಿಸ್ಥಿತಿಯ ಕುರಿತು ನಿಗಾ ವಹಿಸಲು ಕ್ರಮ ಕೈಗೊಂಡಿದ್ದಾರೆ.
ಡಿಹೆಚ್ಒ ಡಾ. ರಂಗನಾಥ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಗ್ರಾಮದಲ್ಲಿ 08 ಕಡೆಗಳಲ್ಲಿನ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 07 ಮಾದರಿಗಳು ಕುಡಿಯಲು ಯೋಗ್ಯವಾಗಿದೆ ಎಂದು ಹಾಗೂ ಒಂದು ಮಾತ್ರ ಯೋಗ್ಯವಿಲ್ಲ ಎಂಬುದಾಗಿ ವರದಿ ಬಂದಿದೆ. ಆದಾಗ್ಯೂ ಗ್ರಾಮಕ್ಕೆ ಪೂರೈಸಲಾಗುತ್ತಿದ್ದ ನೀರಿನ ಮೂಲವನ್ನು ಕಡಿತಗೊಳಿಸಿ, ಟ್ಯಾಂಕರ್ ಮೂಲಕವೇ ನೀರು ಪೂರೈಸಲಾಗುತ್ತಿದೆ. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಗುಣಮುಖರಾಗುತ್ತಿದ್ದಾರೆ. ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಗ್ರಾಮದಲ್ಲಿ ಸ್ವಚ್ಛತೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಡೆಲ್ಟಾ ಮೈತ್ರಿನ್ ಸಿಂಪಡಣೆ ಕೂಡ ಮಾಡಲಾಗುತ್ತಿದೆ. ಗ್ರಾಮದ ಮನೆ ಮನೆಯ ಸರ್ವೆ ಮಾಡಲಾಗುತ್ತಿದ್ದು, ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಮನೆ ಮನೆಗಳಲ್ಲಿ ಜನರ ಆರೋಗ್ಯ ವಿಚಾರಣೆ ಕೈಗೊಳ್ಳುತ್ತಿದ್ದಾರೆ. ಗ್ರಾಮದ ಚರಂಡಿಗಳ ಸ್ವಚ್ಛತಾ ಕಾರ್ಯ ಕೂಡ ನಡೆಸಲಾಗುತ್ತಿದೆ.
ಉಪವಿಭಾಗಾಧಿಕಾರಿ ಕಾರ್ತಿಕ್, ತಹಸಿಲ್ದಾರ್ ನಾಗವೇಣಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ಗಳು ಕೂಡ ಗ್ರಾಮಕ್ಕೆ ತೆರಳಿ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿಗಾ ವಹಿಸಿದ್ದಾರೆ.
ಇಲ್ಲಿನ ಗ್ರಾಮ ಪಂಚಾಯತ್ ಪಿಡಿಒ, ಗ್ರಾಮಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಕೂಡ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಲ್ಲಿ ನಿರತರಾಗಿದ್ದಾರೆ.