ಮೀಸಲಾತಿಯ ಸುಪ್ರೀಂ ಕೋರ್ಟ್ ತೀರ್ಪು | ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಕುಟುಂಬಗಳ ಅಭಿವೃದ್ಧಿಗೆ ದಿಕ್ಸೂಚಿ : ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

1 Min Read

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 01 : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಕುಟುಂಬಗಳ ಅಭಿವೃದ್ಧಿಗೆ ಸುಪ್ರೀಂ ಕೋರ್ಟ್ ನ ಉಪ ವರ್ಗೀಕರಣ ದಿಕ್ಸೂಚಿಯಾಗಲಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ಗುರುವಾರ ಮಾಧ್ಯಮ ಪ್ರಕಟಣೆ ತಿಳಿಸಿರುವ ಅವರು,
ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸುಪ್ರೀಂ ಕೋರ್ಟ್ ಸೂಚಿಸಿರುವ ಮಾರ್ಗವನ್ನು ರಾಜ್ಯ ಸರ್ಕಾರ ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸುವ ನಿರ್ಧಾರವಾಗಬೇಕಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪವರ್ಗೀಕರಣಕ್ಕೆ ಸುಪ್ರೀಂ ಕೋರ್ಟ್ ಏಳು ನ್ಯಾಯಮೂರ್ತಿಗಳ ನ್ಯಾಯಪೀಠ 6.1 ಬಹುಮತದೊಂದಿಗೆ ತೀರ್ಪು ಪ್ರಕಟಿಸಿದೆ.

ಈ ಪ್ರಕರಣದಲ್ಲಿ ಎಸ್.ಸಿ, ಎಸ್.ಟಿ ವರ್ಗದಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಅನುಮತಿ ಎಂದು ಪೀಠ ಹೇಳಿದೆ. ನ್ಯಾಯಮೂರ್ತಿ ಬೇಲ್ ತ್ರಿವೇದಿ ಅನುಮತಿಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ನ ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯ್ದೆ 2006 ರ ಸೆಕ್ಷನ್ 4(5) ನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ಧುಗೊಳಿಸಿತ್ತು, ಹೈಕೋರ್ಟ್ನ ಈ 2010 ರ ತೀರ್ಪನ್ನು ಪ್ರಶ್ನಿಸಿ ಪಂಜಾಬ್‌ನ ಸರ್ಕಾರ ಸಲ್ಲಿಸಿದ ಅರ್ಜಿ ಸೇರಿದಂತೆ ಒಟ್ಟು 23 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

ಈ ಮೂಲಕ ಪಂಜಾಬ್‌ನ ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳಲ್ಲಿ ಉಪ ವರ್ಗೀಕರಣಕ್ಕೆ ರಾಜ್ಯಗಳ ಅಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ವಿಶೇಷವಾಗಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಜಾತಿವಾರು ಒಳಮೀಸಲಾತಿಯಾಗಿರದೆ ಹೆಚ್ಚು ತಾರತಮ್ಯವನ್ನು ಅನುಭವಿಸುತ್ತಿರುವವರಿಗೆ ಮೀಸಲಾತಿಯಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲು ಸರ್ಕಾರಗಳು ಉಪವರ್ಗೀಕರಣ ಮಾಡಬಹುದಾಗಿರುತ್ತದೆ.

ಉಪ ವರ್ಗೀಕರಣ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದೊಳಗಿನ ತಾರತಮ್ಯ ಮಟ್ಟವನ್ನು ಆಧರಿಸಿ ಕಡುಬಡ ಕುಟುಂಬಗಳ ಅಭಿವೃದ್ಧಿಗೆ ಉಪ ವರ್ಗೀಕರಣದ ಮೂಲಕ ಅವಕಾಶಗಳನ್ನು ರಾಜ್ಯ ಸರ್ಕಾರ ನೀಡುವ ಮೂಲಕ ಮೀಸಲಾತಿಯ ಸಾಮಾಜಿಕ ನ್ಯಾಯವನ್ನ ಎತ್ತಿಹಿಡಿಯಬೇಕಾಗಿದೆ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *