ಕೊಲ್ಕತ್ತಾ : ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಗೆ ಕ್ರಿಮಿನಲ್ ಕೇಸ್ ಗಳಿಗೆ ಸಂಬಂಧಿಸಿದಂತೆ ಬಂಧನದಿಂದ ಹೈಕೋರ್ಟ್ ರಕ್ಷಣೆ ನೀಡಿ ಆದೇಶ ಹೊರಡಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಆ ಆದೇಶ ಸಂಬಂಧ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ಸುವೇಂದು ಅಧಿಕಾರಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆ ಬಳಿಕ ಇವರ ವಿರುದ್ಧ ಕ್ರಿಮಿನಲ್ ಕೇಸ್ ಗಳು ದಾಖಲಾಗಿದ್ದವು. ಈ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿ ವಿರುದ್ಧದ ಯಾವುದೇ ಬಲವಂತದ ಕ್ರಮಕ್ಕೆ ಹೈಕೋರ್ಟ್ ನ ಏಕಸದಸ್ಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ, ಪಶ್ಚಿಮ ಬಂಗಾಳ ಸರ್ಕಾರ ವಿಭಾಗೀಯ ಪೀಠದ ಮುಂದೆ ಹೋಗಿತ್ತು. ಆದ್ರೆ ಆದೇಶಕ್ಕೆ ತಡೆ ನೀಡಲು ವಿಭಾಗೀಯ ಪೀಠ ನಿರಾಕರಿಸಿತ್ತು. ಬಳಿಕ ಪಶ್ಚಿಮ ಬಂಗಾಳ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಈ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠವು ಇದೇ ಆದೇಶದ ವಿರುದ್ಧ ಬರುವ ಎರಡನೇ ಪ್ರಕರಣ ಎಂದು ಗುರುತಿಸಿದೆ. ಡಿಸೆಂಬರ್ 13 ರ ತನ್ನ ತೀರ್ಪಿನಲ್ಲಿ, ಸರ್ವೋಚ್ಚ ನ್ಯಾಯಾಲಯವು “ಹೈಕೋರ್ಟ್ ಪ್ರಕ್ರಿಯೆಗಳನ್ನು ವಶಪಡಿಸಿಕೊಂಡಿರುವುದರಿಂದ ಮತ್ತು ವಿಶೇಷ ರಜೆ ಅರ್ಜಿಗಳು ಮಧ್ಯಂತರ ಆದೇಶದಿಂದ ಉದ್ಭವಿಸುವುದರಿಂದ, ಸಂವಿಧಾನದ 136 ನೇ ವಿಧಿಯ ಅಡಿಯಲ್ಲಿ ಈ ನ್ಯಾಯಾಲಯದ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ನಾವು ಒಲವು ಹೊಂದಿಲ್ಲ ಎಂದಿದೆ.