ಬೇರೆ ರಾಜ್ಯದ ಸಿನಿಮಾಗಳಿಗೆ ಸಪೋರ್ಟ್ ಮಾಡಿದ ಹಾಗೆ ನಮ್ಮ ಸಿನಿಮಾಗಳಿಗೆ ಸಪೋರ್ಟ್ ಮಾಡಿ : ಕಿಚ್ಚ ಸುದೀಪ್

2 Min Read

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 23 : “ನಾನು ಬಂದೇ ಬರುತ್ತೀನಿ ಅಂತ ಚಿತ್ರದುರ್ಗದ ಜನತೆಗೆ ಮಾತು ಕೊಟ್ಟಿದ್ದೆ. ಹಾಗಾಗಿ ಒಬ್ಬನೇ ಬಂದಿಲ್ಲ, ಜತೆಗೆ ನನ್ನ‌ ಕುಟುಂಬವನ್ನೂ ಕರೆದುಕೊಂಡು ಬಂದಿದ್ದೇನೆ. ಈ ಕುಟುಂಬಕ್ಕೆ ಪರಿಚಯಿಸೋಣ ಅಂತ” ಎಂದು ಕಿಚ್ಚ ಸುದೀಪ್ ಚಿತ್ರದುರ್ಗದಲ್ಲಿ ನಡೆದ ಮ್ಯಾಕ್ಸ್ ಚಿತ್ರದ ಪ್ರಿರಿಲೀಸ್ ಇವೆಂಟ್ ವೇದಿಕೆಯಲ್ಲಿ ಮಾತನಾಡುತ್ತಾ ಹೇಳಿದರು.

ಟ್ರೇಲರ್ ಲಾಂಚ್ ಆದ ನಂತರ ವೇದಿಕೆಗೆ ಆಗಮಿಸಿದ ಸುದೀಪ್ ಅವರು ಮಾತನಾಡುತ್ತಾ, ನನಗೆ ಪ್ರತಿಸಲ ಇಲ್ಲಿ ಬರೋದಿಕ್ಕೆ ತುಂಬಾ ಖುಷಿಯಾಗುತ್ತೆ. “ಹುಚ್ಚ” ಅಂತಹ ಅದ್ಭುತ ಸಿನಿಮಾ ಕೊಟ್ಟ ಕೋಟೆನಾಡಿದು. ನಿಮ್ಮನ್ನು ಎರಡೂವರೆ ವರ್ಷ ಕಾಯಿಸಿದ್ದಕ್ಕೆ ದಯವಿಟ್ಟು ಕ್ಷಮಿಸಿಬಿಡಿ. ಇನ್ಮುಂದೆ ಹೀಗಾಗಲ್ಲ. ಇದೇ 25ಕ್ಕೆ “ಮ್ಯಾಕ್ಸ್” ಸಿನಿಮಾ ನಿಮ್ಮ‌ ಮುಂದೆ ತರೋದಿಕ್ಕೆ ಖುಷಿಯಾಗುತ್ತಿದೆ. ನಿರ್ಮಾಪಕರಿಗೆ, ಕಾರ್ತಿಕ್ ಗೌಡ ಅವರಿಗೆ, ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ಮುಖ್ಯವಾಗಿ ರಾಕ್ ಲೈನ್ ವೆಂಕಟೇಶ್ ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು. ಅವರಿಲ್ಲದೆ ಇದ್ದರೆ ಸಿನಿಮಾ ಈ ಹಂತಕ್ಕೆ ಬರುತ್ತಿರಲಿಲ್ಲ. ಉಪೇಂದ್ರ ಅವರ ಯುಐ ಫಾಲೋಅಪ್ ನಲ್ಲಿ ಮ್ಯಾಕ್ಸ್ ಬರುತ್ತದೆ. ಇದರಲ್ಲಿ ಬಹಳಷ್ಟು ಹೊಸಬರಿದ್ದಾರೆ. ಅವರಿಗೆಲ್ಲ ಒಳ್ಳೇದಾಗಲಿ. ಸಿನಿಮಾ ತುಂಬಾ ಚೆನ್ನಾಗಿದೆ. ಮೂರು ತಿಂಗಳು ಪ್ರತಿ ರಾತ್ರಿ ಮಾಡುತ್ತಿದ್ದ ಶೂಟಿಂಗ್ ಮುಗಿದ ಖುಷಿಗೆ ಕಾಳಿಮಾತೆ ಮುಂದೆ ಹಾಕಿದ್ದ ಸ್ಟೆಪ್ಪೇ ಈಗ ವೈರಲ್ ಆಗಿದೆ. ಕನ್ನಡ ಚಿತ್ರರಂಗವನ್ನು ಇದೇ ರೀತಿ ಒಗ್ಗಟ್ಟಾಗಿ ನೋಡಬೇಕು ಅಂತ ಇಷ್ಟಪಡೋನು ನಾನು. ಬೇರೆ ರಾಜ್ಯದ ಸಿನಿಮಾಗಳಿಗೆ ಸಪೋರ್ಟ್ ಮಾಡಿದ ಹಾಗೆ ನಮ್ಮ ಸಿನಿಮಾಗಳಿಗೆ ಸಪೋರ್ಟ್ ಮಾಡಿ ಎಂದು ಹೇಳಿದರು.

ವಿತರಕ ಕಾರ್ತಿಕ್ ಗೌಡ ಮಾತನಾಡುತ್ತ ಈಗಾಗಲೇ ಮ್ಯಾಕ್ಸ್ ಚಿತ್ರದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು ಎಲ್ಲಾ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಬರುತ್ತಿದೆ. ಪೈಲ್ವಾನ್ ಮೂಲಕ ಆರಂಭವಾದ ನಮ್ಮ ಸುದೀಪ್ ಅವರ ಬಾಂಧವ್ಯ ಈ ಚಿತ್ರದವರೆಗೂ ಬಂದಿದೆ. 2025ರಲ್ಲಿ ಕೆ.ಆರ್.ಜಿ.ಸ್ಟೂಡಿಯೋಸ್‌ ಹಾಗೂ ಕಿಚ್ಚ ಕ್ರಿಯೇಷನ್ಸ್ ಸಹಯೋಗದಲ್ಲಿ ಸುದೀಪ್ ಅವರ ನಿರ್ದೇಶನದ ಸಿನಿಮಾ ದೊಡ್ಡಮಟ್ಟದಲ್ಲಿ ನಿರ್ಮಾಣವಾಗಲಿದೆ ಎಂದರು.

ಚಿತ್ರದುರ್ಗದ ಎಸ್.ಜೆ.ಎಂ.ಸ್ಟೇಡಿಯಂನಲ್ಲಿ ನಡೆದ “ಮ್ಯಾಕ್ಸ್” ಚಿತ್ರದ ಟ್ರೇಲರ್ ಲಾಂಚ್ ಹಾಗೂ ಪ್ರಿರಿಲೀಸ್ ಸಮಾರಂಭದ ವೇದಿಕೆ ಮೇಲೆ ಡಾಲಿ ಧನಂಜಯ್, ಡಾರ್ಲಿಂಗ್ ಕೃಷ್ಣ, ಯುವ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಶ್ರೇಯಸ್ ಮಂಜು, ಸುಕೃತಾ ವಾಗ್ಲೆ, ನಿರ್ದೇಶಕರಾದ ಎ.ಪಿ. ಅರ್ಜುನ್ ಹಾಗೂ ರೋಹಿತ್ ಪದಕಿ, ವಿತರಕರಾದ ಕೆ.ಆರ್.ಜಿ.ಸ್ಟುಡಿಯೋಸ್ ನ ಕಾರ್ತಿಕ್ ಗೌಡ, ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ನವೀನ್ ಶಂಕರ್ ಮುಂತಾದವರು ಕಿಚ್ಚ ಸುದೀಪ್ ಹಾಗೂ “ಮ್ಯಾಕ್ಸ್” ಚಿತ್ರದ ಕುರಿತಂತೆ ಮಾತನಾಡಿದರು. ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಹಾಗೂ ಪುತ್ರಿ ಸಾನ್ವಿ ಸುದೀಪ್ ಕುತೂಹಲದಿಂದ ಇಡೀ ಕಾರ್ಯಕ್ರಮವನ್ನು ವೀಕ್ಷಿಸಿದರು.
ವರ್ಣರಂಜಿತ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರ ಹಾಡುಗಳಿಗೆ ನಟಿ ಶರಣ್ಯ ಶೆಟ್ಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಕಾರ್ತೀಕ್ ಮಹೇಶ್ ಅವರ ಅದ್ಭುತ ನೃತ್ಯಪ್ರದರ್ಶನ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿತು.

ಕಲೈಪುಲಿ ಎಸ್. ತನು ಅವರ ವಿ‌ ಕ್ರಿಯೇಷನ್ಸ್ ಹಾಗೂ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಶನ್ಸ್ ನಿರ್ಮಾಣದ, ವಿಜಯ್ ಕಾರ್ತಿಕೇಯ ಅವರ ನಿರ್ದೇಶನದ ಬಹು ನಿರೀಕ್ಷಿತ “ಮ್ಯಾಕ್ಸ್” ಚಿತ್ರದ ಕನ್ನಡದಲ್ಲಿ ಡಿಸೆಂಬರ್ 25 ರಂದು ಹಾಗೂ ಉಳಿದ ಭಾಷೆಗಳಲ್ಲಿ ಡಿ.27ರಂದು ಬಿಡುಗಡೆಯಾಗುತ್ತಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ‌.

Share This Article
Leave a Comment

Leave a Reply

Your email address will not be published. Required fields are marked *