ಸುದ್ದಿಒನ್, ಚಿತ್ರದುರ್ಗ, ಜುಲೈ. 25 : ನಗರದ ವಿದ್ಯಾನಗರ ಬಡಾವಣೆಗೂ ಶಾಂತಿಸಾಗರ ನೀರನ್ನು ಸರಬರಾಜು ಮಾಡುವಂತೆ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ ಮತ್ತು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಮೊದಲು ಚಿತ್ರದುರ್ಗ ನಗರಸಭೆಯಿಂದ ವಿದ್ಯಾನಗರಕ್ಕೆ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿತ್ತು. ಆದರೆ ಮೆದೇಹಳ್ಳಿ ಗ್ರಾಮ ಪಂಚಾಯಿತಿಗೆ ನೀರಿನ ಕಂದಾಯವನ್ನು ಕಟ್ಟಲು ನಗರಸಭೆಯು ಸೂಚಿಸಲಾಯಿತು. ಆದರೆ ಮೆದೇಹಳ್ಳಿ ಗ್ರಾಮ ಪಂಚಾಯಿತಿಯವರು ಕಟ್ಟಲಿಲ್ಲ. ಇದರ ಬಗ್ಗೆ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದಿಂದ ಸಾಕಷ್ಟು ಮನವಿಗಳನ್ನು ಗ್ರಾಮ ಪಂಚಾಯಿತಿಗೆ ಮಾಡಲಾಯಿತು ಅದರೂ ಪ್ರಯೋಜನವಾಗಲಿಲ್ಲ.
ಜಗಳೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪೈಪ್‍ಲೈನ್ ಬಡಾವಣೆಯ ಮಧ್ಯ ಭಾಗದಲ್ಲಿ ಹಾದುಹೋಗಿದೆ. ಆದರೂ ಸಹಾ ವಿದ್ಯಾನಗರ ಬಡಾವಣೆಯ ಜನರು ಶಾಂತಿಸಾಗರದ ನೀರಿನಿಂದ ವಂಚಿತರಾಗಿರುತ್ತಾರೆ. ಇಲ್ಲಿನ ಬಡಾವಣೆಯ ಬೋರ್‍ವೆಲ್‍ಗಳ ನೀರಿನಲ್ಲಿ ನೈಟ್ರೇಟ್ಸ್, ಸಲ್ಪೇಟ್ ಮತ್ತು ವಿಷಪೂರಿತ ರಾಸಾಯಿನಿಕ ವಸ್ತುಗಳಿಂದ ಕೂಡಿದೆ.
ವಿದ್ಯಾನಗರ ಬಡಾವಣೆಯ ಉತ್ತರ ದಿಕ್ಕಿಗೆ ಮಲ್ಲಾಪುರ ಕೆರೆ ಪಕ್ಕದಲ್ಲಿರುವುದರಿಂದ ಈ ಕೆರೆಗೆ ಚಿತ್ರದುರ್ಗ ನಗರದ ಚರಂಡಿಯ ಮೂಲಕ ಕಲುಷಿತ ನೀರು, ಯು.ಜಿ.ಡಿ. ಗಲೀಜು ಕೂಡ ಕೆರೆಗೆ ಸೇರುತ್ತದೆ. ಇದರಿಂದ ಮಲ್ಲಾಪುರ ಕೆರೆಯ ನೀರು ಸಂಪೂರ್ಣ ಮಲೀನಗೊಂಡಿರುವುದರಿಂದ, ನಮ್ಮ ಬಡಾವಣೆಯ ಕೊಳವೆಬಾಯಿಗಳಿಂದಲೂ ಸಹ ಮೇಲ್ಕಂಡಂತೆ ವಿಷಪೂರಿತ ನೀರು ಬರುವುದರಿಂದ ಈ ನೀರನ್ನು ಬಳಸಲು ಹಾಗೂ ಕುಡಿಯಲು ಯೋಗ್ಯವಾಗಿರುವುದಿಲ್ಲ.
ವಿದ್ಯಾನಗರ ಬಡಾವಣೆಯಿಂದ ಮೆದೇಹಳ್ಳಿ ಗ್ರಾ.ಪಂ.ಗೆ ಸಾಕಷ್ಟು ಕಂದಾಯ ಸೇರಿದಂತೆ ಈ ಭಾಗದ ಸುತ್ತ-ಮುತ್ತಲ ವಾಣಿಜ್ಯ ವ್ಯವಹಾರಗಳಿಂದ ಸಾಕಷ್ಟು ಆದಾಯವಿದ್ದರೂ ಸಹ ಮೂಲಭೂತ ಸೌಲಭ್ಯಗಳನ್ನು ಪೂರೈಸುವಲ್ಲಿ ವಿಫಲಗೊಂಡಿದೆ.
ಶಾಂತಿಸಾಗರದ ಜಲಾಶಯದ ಮೂಲದ ನೀರು ಸರಬರಾಜು ನಿರ್ವಹಣೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಇದರ ಬಗ್ಗೆ ಈ ಹಿಂದೆ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದಿಂದ ಸಾಕಷ್ಟು ಮನವಿಗಳನ್ನು ಸಲ್ಲಿಸಲಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ. ಈಗ ಸಧ್ಯ ಜಗಳೂರು ಪಟ್ಟಣಕ್ಕೆ ಸರಬರಾಜು ಮಾಡುತ್ತಿರುವ ಪೈಪ್‍ಲೈನ್ ದುರಸ್ತಿ ಮಾಡ ಬೇಕಾಗಿರುವುದರಿಂದ, ಜಗಳೂರಿಗೆ ಸಧ್ಯ ಸಾಕಷ್ಟು ನೀರು ಅವರಲ್ಲಿ ಇರುವುದರಿಂದ ಈ ಲೈನಿನ ಬಗ್ಗೆ ರಿಪೇರಿಗೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಆದುದರಿಂದ ವಿದ್ಯಾನಗರದಲ್ಲಿ ಹಾದು ಹೋಗಿರುವ ಪೈಪ್‍ಲೈನ್‍ಗೆ ಲಿಂಕ್ ಅಳವಡಿಸಿ ವಿದ್ಯಾನಗರದ ನಿವಾಸಿಗಳಿಗೆ ಶಾಂತಿಸಾಗರದ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ವಿದ್ಯಾನಗರದ ಎಲ್ಲಾ ಕೊಳವೆ ಬಾವಿಗಳಲ್ಲಿನ ನೀರು ಹೆಚ್ಚಿನ ಲವಣಾಂಶ ಮತ್ತು ವಿಷಪೂರಿತ ರಸಾಯನಿಕ ವಸ್ತುಗಳಿಂದ ಕೂಡಿರುವುದರಿಂದ ಕುಡಿಯಲು ಯೋಗ್ಯವಿರುವುದಿಲ್ಲ. ಐ.ಬಿ.ಎಸ್. ಪ್ರಕಾರ ನಿಗದಿ ಪಡಿಸಿದ ಪರಿಮಿತಿಗಿಂತ ಲವಣಾಂಶಗಳು ಹೆಚ್ಚಾಗಿರುವುದರಿಂದ ಮತ್ತು ಇಂತಹ ನೀರನ್ನು ಕುಡಿಯುವುದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ಕ್ರಮೇಣ ದುಷ್ಪರಿಣಾಮ ಬೀರಿ ತೊಂದರೆಯಾಗಬಹುದೆಂದು ವೈಜ್ಞಾನಿಕವಾಗಿ ಹೇಳಬಹುದು.
ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ ಈಗ ಸರಬರಾಜು ಮಾಡುತ್ತಿರುವ ಕೊಳವೆಬಾವಿಗಳ ನೀರನ್ನು ನಿಲ್ಲಿಸಿ, ಶಾಂತಿಸಾಗರದ ನೀರನ್ನು ವಿದ್ಯಾನಗರ ಬಡಾವಣೆಗೆ ಸರಬರಾಜು ಮಾಡಬೇಕೆಂದು ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಜೆ. ಪರುಶುರಾಮ, ಅಧ್ಯಕ್ಷ ಜಿ.ಆರ್. ಪ್ರತಾಪ ರೆಡ್ಡಿ, ಮಂಜುನಾಥ, ಜ್ಞಾನಮೂರ್ತಿ, ರಘುರಾಮ ರೆಡ್ಡಿ, ರಾಘವೇಂದ್ರ ಸೇರಿದಂತೆ ಇತರರು ಇದ್ದರು.


