ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ಒಂಬತ್ತು ತಿಂಗಳು ಕಾಲ ಬಾಹ್ಯಾಕಾಶದಲ್ಲಿದ್ದು, ಕ್ಯಾಪ್ಸೂಲ್ ಮೂಲಕ ಭೂಮಿಯನ್ನು ತಲುಪಿದ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರ ಆತ್ಮಸ್ಥೈರ್ಯ, ಛಲ, ಸಂಕಷ್ಟವನ್ನು ತಾಳ್ಮೆಯಿಂದ ಗೆದ್ದ ರೀತಿ ಈಗಿನ ಯುವಪೀಳಿಗೆಗೆ ಮಾದರಿ ಆಗಬೇಕು ಎಂದು ಜೀವರಕ್ಷಕ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ.ಕೆ.ಸೌಮ್ಯಾ ಮಂಜುನಾಥ್ ತಿಳಿಸಿದ್ದಾರೆ.

ಬುಧವಾರ ಪತ್ರಿಕೆ ಹೇಳಿಕೆ ನೀಡಿರುವ ಅವರು, ಎಂಟು ದಿನಕ್ಕೆ ಸೀಮಿತವಾಗಿ ಮಾನಸಿಕವಾಗಿ ಸಿದ್ಧಗೊಂಡು ಬಾಹ್ಯಾಕಾಶಕ್ಕೆ ತೆರಳಿದ್ದ ಇವರು, ತಾಂತ್ರಿಕ ಸಮಸ್ಯೆ ಕಾರಣಕ್ಕೆ ಒಂಬತ್ತು ತಿಂಗಳ ಕಾಲ ಅಲ್ಲಿಯೇ ಊಟ, ನೀರು, ನಿದ್ರೆ, ದಿನನಿತ್ಯದ ಕಾರ್ಯಗಳಲ್ಲಿ ಏರುಪೇರು ಆಗಿದ್ದರೂ ಒಂಬತ್ತು ತಿಂಗಳ ಕಾಲ ಇದ್ದಿದ್ದೂ ನಿಜಕ್ಕೂ ಸ್ಮರಣೀಯ. ಭೂಮಿ ಮೇಲೆ ವಾಸವಿರುವ ನಾವು ಒಂದು ಕ್ಷಣ ಬಾಯಾರಿಕೆ, ಊಟ, ನಿದ್ರೆ, ಆಸೆಪಟ್ಟ ವಸ್ತುಗಳು ಸಿಗದಿದ್ದ ವೇಳೆ ಸಿಟ್ಟಿನಿಂದ ವರ್ತಿಸುವ ನಮಗೆ ಬಾಹ್ಯಾಕಾಶದಲ್ಲಿ ಇಬ್ಬರೇ ತಮ್ಮ ಆತ್ಮಸ್ಥೈರ್ಯದಿಂದ ಜೀವಂತ ಬದುಕಿ, ಭೂಮಿಗೆ ಹಿಂತಿರುಗಿರುವುದು ವಿಜ್ಞಾನ ಜಗತ್ತಿನಲ್ಲಿಯೇ ಸ್ಮರಣೀಯವಾಗಿ ಉಳಿಯಲಿದೆ. ಜೊತೆಗೆ ನಮಗೆ ಪಾಠವಾಗಬೇಕಿದೆ ಎಂದು ಹೇಳಿದ್ದಾರೆ.

ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಜೀವಂತ ಬರಲು ಯಾವುದೇ ಪವಾಡಗಳು ಕೆಲಸ ಮಾಡಿಲ್ಲ. ಒಂದು ವಿಜ್ಞಾನ ಮತ್ತೊಂದು ಆತ್ಮಸ್ಥೈರ್ಯ. ಆದ್ದರಿಂದ ಈಗಿನ ಯುವಪೀಳಿಗೆ ಎಂತಹ ಸಂಕಷ್ಟದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು.
ವಿಜ್ಞಾನ ಮತ್ತು ಆತ್ಮಸ್ಥೈರ್ಯದತ್ತ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಮೌಢ್ಯ, ಕಂದಾಚಾರಗಳಿಂದ ದೂರ ಇರಬೇಕು. ಪವಾಡಗಳನ್ನು ಮಾಡುತ್ತೇವೆ ಎಂದು ಹೇಳಿ ವಂಚಿಸುವ ವ್ಯಕ್ತಿಗಳಿಗೆ ಮಾರು ಹೋಗಬಾರದು. ಈ ಜಗತ್ತು ವಿಸ್ಮಯವಾಗಿದ್ದು, ಅದರ ಅಧ್ಯಯನದಲ್ಲಿ ತೊಡಗಿರುವ ವಿಜ್ಞಾನಿಗಳು, ಅವರ ಶ್ರಮ, ಬದ್ಧತೆ, ಧೈರ್ಯ ನಮಗೆ ಮಾದರಿ ಆಗಬೇಕು. ನಾವೆಲ್ಲರೂ ಇಂದು ನೆಮ್ಮದಿಯಿಂದ ಜೀವನ ನಡೆಸುತ್ತಿರುವುದಕ್ಕೆ ಇಂತಹ ವಿಜ್ಞಾನಿಗಳು ತ್ಯಾಗದ ಮೂಲಕ ನೀಡಿದ ಕೊಡುಗೆಗಳೇ ಕಾರಣ.
ಆದ್ದರಿಂದ ನಾವೆಲ್ಲರೂ ಅವರನ್ನು ಗೌರವಿಸುವ ಜೊತೆಗೆ ವಿಜ್ಞಾನದ ಕೌತುಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಚಂದ್ರ-ಸೂರ್ಯಗ್ರಹಣ ಸೇರಿ ವಿವಿಧ ಸಂದರ್ಭದಲ್ಲಿ ಮೌಢ್ಯದಿಂದ ಹೊರಬಂದು ವಿಜ್ಞಾನದ ಕಣ್ಣುಗಳಲ್ಲಿ ವೀಕ್ಷಿಸಿ, ಚಿಂತಿಸುವ ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು ಎಂದು ಡೌ.ಸೌಮ್ಯಾ ಮಂಜುನಾಥ್ ತಿಳಿಸಿದ್ದಾರೆ.


